ನವದೆಹಲಿ : ಗಡೀಪಾರಾದ ವಲಸಿಗ ಭಾರತೀಯರನ್ನು ವಿಮಾನದಲ್ಲಿ ಕರೆತರುವ ವೇಳೆ ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಂಡಿರುವುದಕ್ಕೆ ಭಾರತವು ಅಮೆರಿಕದ ಮುಂದೆ ತೀವ್ರ ಕಳವಳ ದಾಖಲಿಸಿದೆ. ಕೈ-ಕಾಲುಗಳಿಗೆ ಸರಪಳಿ ಹಾಕಿದ್ದು, ಮಹಿಳೆಯರನ್ನು ನಡೆಸಿಕೊಂಡ ಬಗ್ಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟಪಡಿಸಿದೆ.
ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವರಾದ ಕೀರ್ತಿವರ್ಧನ್ ಸಿಂಗ್ ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರ ನೀಡಿದರು. ಗಡಿಪಾರಾದವರ ಧಾರ್ಮಿಕ ಸೂಕ್ಷ್ಮತೆ ಮತ್ತು ಆಹಾರ ಆದ್ಯತೆ ಬಗ್ಗೆ ನಮ್ಮ ಕಳಕಳಿ ವ್ಯಕ್ತಪಡಿಸಿದ್ದೆವು. ಅಮೆರಿಕ ವಿದೇಶಾಂಗ ವಿಭಾಗ ಪ್ರತಿಕ್ರಿಯಿಸಿದ್ದು, ' ಸಸ್ಯಾಹಾರದ ಊಟಕ್ಕೆ ಗಡಿಪಾರಾದವರನ್ನು ಮನವಿ ಮಾಡಿದ್ದು ಬಿಟ್ಟರೆ ಧರ್ಮಾಧಾರಿತ ಶಿರವಸ್ತ್ರಗಳನ್ನು ತೆಗೆಯಲು ಸೂಚಿಸಿರಲಿಲ್ಲ. ಅವರು ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಕೇಳಿರಲಿಲ್ಲ' ಎಂದು ತಿಳಿಸಿದೆ ಎಂದರು.
ಮೂರು ವಿಮಾನಗಳಲ್ಲಿ (ಫೆಬ್ರುವರಿ 5, 15, 16ರಂದು) ಗಡೀಪಾರಾದ ನೂರಾರು ಮಂದಿಯನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ನಿರ್ದೇಶನಾಲಯ(ಐಸಿಇ) ಭಾರತಕ್ಕೆ ರವಾನಿಸಿತ್ತು.