ಬೆಂಗಳೂರು: ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಸುರಕ್ಷಿತವಾಗಿ ಮರಳಿ ತಂದಿರುವುದು ಗಮನಾರ್ಹ ಸಾಧನೆಯಾಗಿದ್ದು, ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ನಾಸಾ, ಸ್ಪೇಸ್‌ಎಕ್ಸ್ ಮತ್ತು ಅಮೆರಿಕಕ್ಕಿರುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ನಿಮ್ಮ(ಸುನಿತಾ ವಿಲಿಯಮಸ್) ಪರಿಣತಿಯನ್ನು ಬಳಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
'ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿರುವ ಸುನಿತಾ ಅವರಿಗೆ ಸ್ವಾಗತ. ಇದೊಂದು ಅದ್ಭುತ ಸಾಧನೆಯಾಗಿದೆ. ನಿಮ್ಮ ಈ ಸಾಧನೆ ವಿಶ್ವದಾದ್ಯಂತ ಗಗನಯಾನದ ಉತ್ಸಾಹಿಗಳಿಗೆ ಸ್ಫೂರ್ತಿ ನೀಡಿದೆ' ಎಂದು ನಾರಾಯಣನ್ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸುತ್ತಿರುವಾಗ, ಬಾಹ್ಯಾಕಾಶ ಸಂಶೋಧನೆಯಲ್ಲಿ ನಿಮ್ಮ ಪರಿಣತಿಯನ್ನು ಬಳಸಿಕೊಳ್ಳಲು ನಾವು ಬಯಸುತ್ತೇವೆ' ಎಂದು ಅವರು ಹೇಳಿದರು.
9 ತಿಂಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಅವರು ಬುಧವಾರ ಸ್ಪೇಸ್‌ಎಕ್ಸ್‌ನ 'ಡ್ರ್ಯಾಗನ್' ಗಗನನೌಕೆಯಲ್ಲಿ ಫ್ಲೋರಿಡಾ ಕರಾವಳಿಯಲ್ಲಿ ಬಂದಿಳಿದಿದ್ದಾರೆ.