ಬೀಜಿಂಗ್/ಇಸ್ಲಾಮಾಬಾದ್: ಮಿತ್ರ ರಾಷ್ಟ್ರ ಪಾಕಿಸ್ತಾನದ ಗಗನಯಾತ್ರಿಯನ್ನು ತನ್ನ ಬಾಹ್ಯಾಕಾಶ ಕೇಂದ್ರ ಟಿಯಾಂಗಾಂಗ್‌ಗೆ ಮೊದಲ ವಿದೇಶಿ ಅತಿಥಿಯಾಗಿ ಕಳುಹಿಸಲು ಚೀನಾ ಯೋಜಿಸಿದೆ.
ಪಾಕಿಸ್ತಾನದ ಗಗನಯಾತ್ರಿಗಳನ್ನು ಆಯ್ಕೆ ಮಾಡಿ, ತರಬೇತಿ ನೀಡಿ, ಅವರಲ್ಲಿ ಕೆಲವರನ್ನು ಭೂಮಿಯಿಂದ 400 ಕಿಲೋಮೀಟರ್ ಎತ್ತರದಲ್ಲಿರುವ ಬಾಹ್ಯಾಕಾಶ ಕೇಂದ್ರ 'ಟಿಯಾಂಗಾಂಗ್'ಗೆ ಕಳುಹಿಸುವ ದ್ವಿಪಕ್ಷೀಯ ಒಪ್ಪಂದಕ್ಕೆ ಚೀನಾ ಮತ್ತು ಪಾಕಿಸ್ತಾನ ಶುಕ್ರವಾರ ಸಹಿ ಹಾಕಿವೆ ಎಂದು ಚೀನಾ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್‌ಎ) ಮತ್ತು ಪಾಕಿಸ್ತಾನದ ಬಾಹ್ಯಾಕಾಶ ಮತ್ತು ಬಾಹ್ಯಾಕಾಶ ವಾತಾವರಣ ಸಂಶೋಧನಾ ಆಯೋಗ (ಸುಪಾರ್ಕೊ) ಈ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಈ ಕಾರ್ಯಕ್ರಮಲ್ಲಿ ಇದ್ದರು ಎಂದು ಸರ್ಕಾರಿ ಸ್ವಾಮ್ಯದ ಚೀನಾ ಡೈಲಿ ವರದಿ ಮಾಡಿದೆ.
ಚೀನಾ ಪಾಕಿಸ್ತಾನಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿದೆ.
ಸುಮಾರು ನಾಲ್ಕು ವರ್ಷಗಳಿಂದ ಕಕ್ಷೆಯಲ್ಲಿರುವ ಚೀನೀ ಬಾಹ್ಯಾಕಾಶ ನಿಲ್ದಾಣವು, ಕಕ್ಷೆಯಲ್ಲಿರುವ ರಷ್ಯಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಿರ್‌ಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ.
ಚೀನಾದ ಬಾಹ್ಯಾಕಾಶ ನಿಲ್ದಾಣವನ್ನು, ಚೀನಾ ಮತ್ತು ಅಮೆರಿಕ ನಡುವಿನ ಹೊಸ ಸ್ಪರ್ಧೆಯ ಕ್ಷೇತ್ರವಾಗಿಯೂ ನೋಡಲಾಗುತ್ತದೆ.