ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ಸಂಜೆ ಲಂಡನ್‌ನ ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ವೇಳೆ ಪ್ರೇಕ್ಷಕರೊಬ್ಬರು ಭಾರತ ಮತ್ತು ಪಾಕಿಸ್ತಾನ ನಡುವಿನ ಕಾಶ್ಮೀರ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, 'ಪಾಕಿಸ್ತಾನ ಯಾವಾಗ ಕದ್ದ ಕಾಶ್ಮೀರದ ಭಾಗವನ್ನು ಹಿಂದಿರುಗಿಸುತ್ತದೆಯೋ ಆಗ ಸಮಸ್ಯೆ ಬಗೆಹರಿಯಲಿದೆ' ಎಂದಿದ್ದಾರೆ.
'ಮೊದಲನೆಯನಾಗಿ ಆರ್ಟಿಕಲ್ 370ಅನ್ನು ತೆಗೆದುಹಾಕುವುದು, ಎರಡನೆಯದು ಅಭಿವೃದ್ಧಿ, ಆರ್ಥಿಕ ಚಟುವಟಿಕೆ ಮತ್ತು ಸಾಮಾಜಿಕ ನ್ಯಾಯವನ್ನು ಮರುಸ್ಥಾಪಿಸುವುದು, ಮೂರನೆಯದಾಗಿ ಅತಿ ಹೆಚ್ಚು ಮತದಾನವಾಗುವಂತೆ ಚುನಾವಣೆಯನ್ನು ನಡೆಸುವುದು ಕಾಶ್ಮೀರದಲ್ಲಿ ಬಹುಮುಖ್ಯವಾಗಿದೆ. ನಾವು ಕಾಯುತ್ತಿರುವುದು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡು ಕದ್ದ ಕಾಶ್ಮೀರದ ಭಾಗವನ್ನು ಹಿಂದಿರುಗಿಸುವುದಕ್ಕೆ. ಅದು ಪೂರ್ಣಗೊಂಡಾಗ, ಕಾಶ್ಮೀರದ ಸಮಸ್ಯೆ ಬಗೆಹರಿಯಲಿದೆ ಎಂದು ನಿಮಗೆ ಭರವಸೆ ನೀಡುತ್ತೇನೆ' ಎಂದು ಹೇಳಿದ್ದಾರೆ.