ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ನೇತೃತ್ವದಲ್ಲಿ ಜ್ಞಾನದೀಪ ವಿಶೇಷ ಅನುದಾನದಿಂದ ಮೀಯಪದವು ಶ್ರೀವಿದ್ಯಾವರ್ಧಕ ಪ್ರೌಢ ಶಾಲೆಗೆ 10 ಡೆಸ್ಕ್ ಬೆಂಚ್ ಗಳನ್ನು ವಿತರಿಸಲಾಯಿತು.
ಶಾಲೆಯ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಾಡಿನಾದ್ಯoತ ಜಾರಿಗೆ ತಂದಿದ್ದು, ಧರ್ಮ-ಜಾತಿಗೆ ಅತೀತವಾಗಿ ಮಾನವ ಕುಲದ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಜನಹಿತ ಯೋಜನೆಗಳನ್ನು ಪರಿಚಯಗೊಳಿಸಿರುವುದು ಕೃತಜ್ಞತಾರ್ಹ ಎಂದು ಅಭಿಪ್ರಾಯಪಟ್ಟರು.
ಜನಜಾಗೃತಿ ವೇದಿಕೆ ಕಾಸರಗೋಡು ಇದರ ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಮಾತನಾಡಿ, ಧರ್ಮಸ್ಥಳದ ವಿವಿಧ ಯೋಜನೆಗಳ ಹಾಗೂ ಡಾ. ವೀರೇಂದ್ರ ಹೆಗಡೆ ಅವರ ದೂರದೃಷ್ಟಿಗಳ ಜನೋಪಯೋಗಿ ಕೆಲಸ ಕಾರ್ಯಗಳ ಬಗ್ಗೆ, ಕ್ಷೇತ್ರದಿಂದ ನೀಡುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಸುಂಕದಕಟ್ಟೆ ವಲಯದ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಶುಭ ಹಾರೈಸಿದರು. ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಶ್ರೀಧರ ರಾವ್, ಒಕ್ಕೂಟದ ಅಧ್ಯಕ್ಷ ಗೀತಾ ಲಕ್ಷ್ಮಿ, ಒಕ್ಕೂಟದ ಪದಾಧಿಕಾರಿಗಳಾದ ಮೋನಪ್ಪ ಪೂಜಾರಿ, ಕಿರಣ್ ಬೆಜ್ಜ, ಸೇವಾ ಪ್ರತಿನಿಧಿಗಳಾದ ಮಮತಾ, ದೀಪ ಶ್ರೀ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್, ಹೈಯರ್ ಸೆಕೆಂಡರಿ ವಿಭಾಗದ ಪ್ರಾoಶುಪಾಲ ರಮೇಶ್, ಶಾಲಾ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮೃದುಲಾ ಕೆ. ಯಂ ಸ್ವಾಗತಿಸಿ, ಕನ್ನಡ ಅಧ್ಯಾಪಕ ರಾಜಾರಾಮ ವಂದಿಸಿದರು. ಹಿಂದಿ ಅಧ್ಯಾಪಕ ಲಕ್ಷ್ಮೀಶ ಬೊಳುಂಬು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರತಿನಿಧಿ ಮೇಲ್ವಿಚಾರಕ ಕೃಷ್ಣಪ್ಪ ಪೂಜಾರಿ ಅವರನ್ನು ಅಭಿನಂದಿಸಲಾಯಿತು.