ಮಧೂರು : ಶಿಲಾಮಯ ರಾಜಗೋಪುರದ ನಿರ್ಮಾಣದಿಂದ ದೇವಾಲಯದ ಮೆರಗು ಹೆಚ್ಚುವುದರೊಂದಿಗೆ ದೇಗುಲದ ಶೈಲಿ ಅನಾವರಣಕ್ಕೆ ಕಾರಣವಾಗುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಎದುರು ಕೊಡುಗೈದಾನಿ ಕುಳೂರುಕನ್ಯಾನ ಸದಾಶಿವ ಶೆಟ್ಟಿ ಅವರ ವತಿಯಿಂದ ನಿರ್ಮಿಸಲಾದ ರಾಜಗೋಪುರದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಗೋಪುರದ ಶಿಖರ ದೇಗುಲದ ದೇವರೊಂದಿಗೆ ನೇರ ಸಂಪರ್ಕವನ್ನು ಪಡೆದುಕೊಳ್ಳುವುದರಿಂದ, ದೇವಸ್ಥಾನದಷ್ಟೇ ಗೋಪುರವೂ ಪಾವಿತ್ರ್ಯಕ್ಕೆ ಕಾರಣವಾಗುತ್ತದೆ. ದ್ರಾವಿಡ ಶೈಲಿಯ ರಾಜಗೋಪುರ ನಿರ್ಮಾಣಕ್ಕೆ ಕೈಜೋಡಿಸಿರುವ ದಾನಿಗಳ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಉದ್ಯಮಿ, ಕೊಡುಗೈ ದಾನಿ ಕುತ್ತಿಕ್ಕಾರು ಕುಞಣ್ಣ ಶೆಟ್ಟಿ(ಕೆ.ಕೆ ಶೆಟ್ಟಿ)ಅಧ್ಯಕ್ಷತೆ ವಹಿಸಿದ್ದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿಯೊಂದಿಗೆ ಆಶೀರ್ವಚನ ನೀಡಿದರು. ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ದಿವ್ಯ ಉಪಸ್ಥಿತಿ ಹಾಗೂ ಎಡಕ್ಕಾನ ಮಹಾಬಲೇಶ್ವರ ಭಟ್ ಗೌರವ ಉಪಸ್ಥಿತರಿದ್ದರು. ಮಹಾದ್ವಾರದ ದಾನಿ ಕುಳೂರುಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ನಾಡೋಜ ಡಾ. ಜಿ. ಶಂಕರ್, ಶಶಿಧರ ಶೆಟ್ಟಿ ಬರೋಡ, ರಘುರಾಮ ಶೆಟ್ಟಿ ಕುಳೂರು ಕನ್ಯಾನ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್. ರಾವ್, ಪ್ರಧಾನ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ಬಿ.ಕೆ ಮಧೂರ್, ಸತೀಶ್ ಶೆಟ್ಟಿ ಪಟ್ಲ, ಮಲಬಾರ್ ದೇವಸ್ವಂ ಬೋರ್ಡ್ ಅದ್ಯಕ್ಷ ಸುರೇಂದ್ರನ್, ತುಳು ಚಿತ್ರ ರಂಗದ ಆರ್. ಧನರಾಜ್, ಉಳ್ತೂರ್ ಮೋಹನದಾಸ್ ಶೆಟ್ಟಿ, ರಂಗೋಲಿ ಚಂದ್ರಹಾಸ ಶೆಟ್ಟಿ, ತಿಂಬರ ಸಂಜೀ ಶೆಟ್ಟಿ, ಮುಂಬೈ ಬಂಟರಸಂಘದ ವಿಶ್ವನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶಿಲಾಗೋಪುರದ ಶಿಲ್ಪಿ ರಮೇಶ್, ಯೋಗಪಟು ಅಭಿಜ್ಞಾ ಹರೀಶ್ ಕಾಸರಗೋಡು, ದೇವಾಳಯದ ಎದುರು ಕಾರಂಜಿ ನಿರ್ಮಿಸಿದ ಕಿರಣ್‍ಶರ್ಮ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ದೇವಸ್ಥಾನದ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ದಯಾಸಾಗರ್ ಚೌಟ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಹಾಗೂ ಡಾ. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆ. ನಾರಾಯಣ ನಾಯ್ಕ್ ನಡುಹಿತ್ತಿಲುಕುಳೂರು ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಅಭಿಜ್ಞಾಹರೀಶ್ ಅವರಿಂದ ಯೋಗ ಪ್ರದರ್ಶನ ನಡೆಯಿತು.
ಸಂಸ್ಕøತಿ ಪೋಷಿಸುವ....:
ಭಾರತೀಯ ಸಂಸ್ಕ್ರತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಮ್ಮಿಂದಾಗಬೇಕು ಎಂದು ಬಹುಭಾಷಾ ನಟ, ತೆಲುಗು ಚಿತ್ರರಂಗದ ತಾರೆ ಸುಮನ್ ತಳ್ವಾರ್ ತಿಳಿಸಿದ್ದಾರೆ. ಅವರು ಶಿಲಾಮಯ ಗೋಪುರ ಅನಾವರಣ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ನಮ್ಮ ಧರ್ಮ, ಸಂಸ್ಕøತಿಯನ್ನು ಪ್ರೀತಿಸಿ ಪೋಷಿಸುವುದರ ಜತೆಗೆ ಇತರ ಮತಸ್ಥರನ್ನು ಪ್ರೀತಿಸುವ ಮನೋಭಾವ ನಮ್ಮದಾಗಬೇಕು. ನಮ್ಮ ಧರ್ಮದ ಮೇಲಾಗುವ ದಬ್ಬಾಳಿಕೆಯನ್ನು ವಿರೋಧಿಸುವ ಕೆಚ್ಚೆದೆಯೂ ನಮ್ಮಲ್ಲಿರಬೇಕು ಎಂದು ತಿಳಿಸಿದರು. ತಂದೆ-ತಾಯಿಯನ್ನು ಪ್ರೀತಿಸುವ ಹಾಗೂ ಅವರ ಸೇವೆ ಮಾಡದ ಮಕ್ಕಳ ಬಾಳು ಸುಖಮಯವಾಗಿರಲು ಎಂದಿಗೂ ಸಾಧ್ಯವಿಲ್ಲ. ತಂದೆತಾಯಿ ಹಾಗೂ ಶ್ರೀದೇವರ ಅನುಗ್ರಹವಿದ್ದರೆ ಜೀವನದಲ್ಲಿ ನಮಗೆ ಉನ್ನತಿಗೇರಲು ಸಾಧ್ಯ. ಮಧೂರು ಕ್ಷೇತ್ರದ ಇತಿಹಾಸ ತನ್ನನ್ನು ಪುಳಕಿತಗೊಳಿಸಿದೆ ಎಂದು ತಿಳಿಸಿದರು.