ಮಧೂರು: ಕೂಡ್ಲು ಶೇಷವನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ತೆಂಕು ಭಾಗದ ಸುತ್ತು ಗೋಪುರದ ಶಿಲಾನ್ಯಾಸವನ್ನು ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಯವರ ಆಶೀರ್ವಾದದೊಂದಿಗೆ ದೇವಸ್ಥಾನದ ಶಿಲ್ಪಿಗಳಾದ ರಮೇಶ್ ಕಾರಂತರ ಮಾರ್ಗ ನಿರ್ದೇಶನದಲ್ಲಿ ಅರವತ್ ನಾರಾಯಣ ತಂತ್ರಿಯವರು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಾಯ ಕಾರಂತರು ಭೂಮಿ ಪೂಜೆ ನೆರವೇರಿಸಿದರು.
ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಉದ್ಘಾಟಿಸಿ ದೇವಸ್ಥಾನಗಳಲ್ಲಿ ಸುತ್ತು ಗೋಪುರಗಳ ಪ್ರಾಧಾನ್ಯತೆಗಳನ್ನು ವಿವರಿಸಿದರು. ಶೇಷವನ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅನುವಂಶಿಕ ಮೊಕ್ತೇಸರ ಸದಾಶಿವ, ಟ್ರಸ್ಟ್‍ನ ಕಾರ್ಯದರ್ಶಿ ಗೋಪಾಲಕೃಷ್ಣ ಪಾಯಿಚ್ಚಾಲ್, ವಾರ್ಡ್ ಸದಸ್ಯ ಸಂಪತ್ ಪೆರ್ನಡ್ಕ, ಆಶಾ ಉಪಾಧ್ಯಾಯ, ಶೇಷವನ ಮಹಿಳಾ ಸಂಘದ ಕಾರ್ಯದರ್ಶಿ ಪ್ರಮೀಳಾ, ಯುವಕ ಸಂಘದ ಅಧ್ಯಕ್ಷ ಸನತ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು. ಸುರೇಶ ಮಣಿಯಾಣಿ ಸ್ವಾಗತಿಸಿ, ಪ್ರಕಾಶ ಶೆಟ್ಟಿ ವಂದಿಸಿದರು. ಯುವಕ ಸಂಘದ ಕಾರ್ಯದರ್ಶಿ ರಾಹುಲ್ ಪಾಯಿಚ್ಚಾಲ್ ನಿರೂಪಿಸಿದರು.