ಬದಿಯಡ್ಕ:ಅಂತರಂಗ ಪರಿಶುದ್ಧತೆಯಿಂದ ಕೈಗೊಳ್ಳುವ ದೇವತಾ ಕಾರ್ಯ ಭಗವಂತನ ಪ್ರಾಪ್ತಿಗೆ ಕಾರಣವಾಗುತ್ತದೆ. ರಾಗ-ದ್ವೇಶಗಳನ್ನು ಇಲ್ಲವಾಗಿಸಿ ಭಕ್ತಿ, ಪ್ರೇಮ, ಸತ್ಕರ್ಮ ಪಥಗಳ ಮೂಲಕ ಸದ್ಗುಣ ಸಂಪನ್ನರಾಗಿ ನಾರಾಯಣನಲ್ಲಿ ಐಕ್ಯವಾಗುವ ಪ್ರಕ್ರಿಯೆ ಜೀವನದ ಲಕ್ಷ್ಯವಾಗಿರಬೇಕು ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದಚ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ನುಡಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ವಿಷ್ಣುಪ್ರಿಯ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ತುಳುನಾಡ ಸಂಗಮ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ತಾನದ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ಮಾತನಾಡಿ, ಧ್ಯೇಯದೊಂದಿಗೆ ಬದುಕುವುದು ಮಾನವ ಲಕ್ಷ್ಯವಾಗಿದ್ದು, ಕರಾವಳಿ ನಾಡಿನ ಜನರ ಆಚಾರ-ವಿಚಾರ, ಆರಾಧನೆ, ಪರಂಪರೆಗಳ ಹಿಂದೆ ಸುವ್ಯವಸ್ಥಿತವಾದ ಧಾರ್ಮಿಕ ನೆಲೆಗಟ್ಟಿದೆ. ತುಳು-ಕನ್ನಡ-ಮಲೆಯಾಳ ಸಹಿತವಾದ ಬಹುಭಾಷಾ ಸಂಗಮನ ನೆಲ ಬಹು ಸಂಸ್ಕøತಿ, ಆರಾಧನೆಯ ಮೂಲಕ ವಿಶಿಷ್ಟವಾಗಿ ನಡೆದು ಬರುತ್ತಿದ್ದು, ಯುವ ತಲೆಮಾರಿಗೆ ಇದನ್ನು ದಾಟಿಸುವ ಕಾರ್ಯಯೋಜನೆಗಳು ದೇವಾಲಯ, ಮಠ, ಮಂದಿರಗಳ ಮೂಲಕ ಮೂಡಿಬರಬೇಕು. ಕಾರ್ಮಾರಲ್ಲಿ ಭಜಕರೆಲ್ಲ ಒಗ್ಗಟ್ಟಾಗಿ ಪುನಃ ಪ್ರತಿಷ್ಠಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕರಸೇವಕರಾಗಿ ಹೆಸರಿಗೆ ಹೊಂದಿಕೊಳ್ಳುವಂತೆ ಕರಾ ಅಮರರು ಎಂದವರು ಅನ್ವರ್ಥ ನಾಮವಿಶೇಷತೆಯನ್ನು ವಿಶ್ಲೇಶಿಸಿದರು.
ಉಲ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಅವರು ಧಾರ್ಮಿಕ ಉಪನ್ಯಾಸ ನೀಡಿ, ತುಳು ನಾಡಿನ ಆಚಾರ ವಿಚಾರಗಳ ಬಗ್ಗೆ ಸವಿವರ ಮಾಹಿತಿಗಳನ್ನು ನೀಡಿ ವೈಶಿಷ್ಟ್ಯತೆಯನ್ನು ವಿವರಿಸಿದರು. ಡಾ.ನರೇಶ್ ರೈ ದೈಪ್ಪುಣಿಗುತ್ತು, ಶಂಕರ ರೈ ಮಾಸ್ತರ್, ಕೋಳಾರು ಸತೀಶ್ಚಂದ್ರ ಭಂಡಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಗಣೇಶ್ ಉಳ್ಳೋಡಿ, ರಾಧಾಕೃಷ್ಣ ರೈ ಕಾರ್ಮಾರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ಭಜನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ನಾಯ್ಕ ನೀರ್ಚಾಲು ವಂದಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ವಂದಿಸಿರು.
ಬಳಿಕ ಲ.ಕಿಶೋರ್ ಡಿ.ಶೆಟ್ಟಿಯವರ ನಿರ್ದೇಶನದಲ್ಲಿ ಲಕುಮಿ ತಂಡದವರಿಂದ ‘ಒರಿಯೆ ಆಂಡಲಾ ಸರಿ ಬೋಡು’ ತುಳು ನಾಟಕ ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ ಪ್ರದರ್ಶನಗೊಂಡಿತು.