ಮಾಸ್ಕೋ: ಕಪ್ಪು ಸಮುದ್ರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಪುನರಾರಂಭಿಸುವುದು ಹಾಗೂ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ರಷ್ಯಾ ಮತ್ತು ಅಮೆರಿಕ ಮಾತುಕತೆ ನಡೆಸಲಿವೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮುಂದಿನವಾರ ಸಭೆ ನಡೆಯಲಿದೆ ಎಂದು ಕ್ರೆಮ್ಲಿನ್ ತಿಳಿಸಿದೆ.
ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು, ಮುಂದಿನ ದಿನಗಳಲ್ಲಿ ತಜ್ಞರ ಮಟ್ಟದಲ್ಲಿ ಮಾತುಕತೆಗಳನ್ನು ಮುಂದುವರಿಸುವ ಭರವಸೆ ಇದೆ ಎಂದೂ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಕದನ ವಿರಾಮ ಘೋಷಣೆ ಸಂಬಂಧ ಮಾತುಕತೆಗಳು ಪ್ರಗತಿಯಲ್ಲಿವೆ. ಇದೇ ವಿಚಾರವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಸುದೀರ್ಘ ಮಾತುಕತೆ ನಡೆಸಿದ್ದರು.
ಆ ವೇಳೆ, 30 ದಿನ ಕದನವಿರಾಮ ಘೋಷಿಸಬೇಕು ಎಂಬ ಟ್ರಂಪ್ ಪ್ರಸ್ತಾವವನ್ನು ಪುಟಿನ್ ತಳ್ಳಿಹಾಕಿದ್ದರು. ಅದರ ಬೆನ್ನಲ್ಲೇ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ದಾಳಿ ನಿಲ್ಲಿಸಲು ರಷ್ಯಾ ನಿರಾಕರಿಸಿದೆ. ಯುದ್ಧ ಇನ್ನಷ್ಟು ಕಾಲ ಮುಂದುವರಿಯುವುದನ್ನು ತಡೆಯಲು ಒತ್ತಡ ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಕದನ ವಿರಾಮ ಮಾತುಕತೆ ಪ್ರಸ್ತಾವವನ್ನು ಪುಟಿನ್ ತಿರಸ್ಕರಿಸಿದ ಹಿಂದೆಯೇ, ರಷ್ಯಾದ ಸೇನೆ ಉಕ್ರೇನ್‌ನ ವಿವಿಧ ನಗರಗಳ ಮೇಲೆ ಬುಧವಾರ ಸರಣಿ ಡ್ರೋನ್ ದಾಳಿ ನಡೆಸಿದೆ.
ಈ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆಸ್ಪತ್ರೆಗಳು, ಇಂಧನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.