ಬದಿಯಡ್ಕ: ಅನೇಕ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿರುವ ಮುಂಡಿತ್ತಡ್ಕ ಶಾಲೆಯ ಶಿಕ್ಷಕ ಪ್ರಶಾಂತ್ ರೈ ಬದಿಯಡ್ಕ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಅವರ ಚಿಕಿತ್ಸೆಗೆ ನೆರವನ್ನು ನೀಡುವ ಸಲುವಾಗಿ ಬದಿಯಡ್ಕದ ಸಿನ್ಸಿಯರ್ ಅಟೋ ಚಾಲಕರು ಒಂದು ದಿನದ ಕಾರುಣ್ಯ ಯಾತ್ರೆ ನಡೆಸಿದರು.
ಗುರುವಾರ ಬೆಳಗ್ಗೆ ಬದಿಯಡ್ಕದಲ್ಲಿ ಜನಾನುರಾಗಿ ವೈದ್ಯ ಡಾ. ಶ್ರೀನಿಧಿ ಸರಳಾಯ ಉದ್ಘಾಟಿಸಿ ಮಾತನಾಡಿ, ಪ್ರಶಾಂತ್ ರೈ ಎಂಬ ಅಧ್ಯಾಪಕರು ಸಾಮಾಜಿಕವಾಗಿಯೂ ಜನರೊಂದಿಗೆ ಒಡನಾಡಿಕೊಂಡಿದ್ದ ಅಪೂರ್ವ ವ್ಯಕ್ತಿ. ಕ್ಯಾನ್ಸರ್ ಎಂಬ ಮಾರಕ ರೋಗದಿಂದ ಅವರು ಮುಕ್ತಿ ಹೊಂದಿ ಮತ್ತೆ ನಾಡಿನ ಜನಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಅವರಿಗೆ ದೇವರ ಅನುಗ್ರಹವಾಗಬೇಕು. ಅವರು ಶೀಘ್ರ ಗುಣಮುಖರಾಗುವಂತೆ ನಾವೆಲ್ಲ ಪ್ರಾರ್ಥಿಸಿ ಚಿಕಿತ್ಸೆಗೆ ತಮ್ಮ ಕೈಲಾದ ಸೇವೆಯನ್ನು ಮಾಡೋಣ. ನಿತ್ಯ ಜನಸೇವೆಯಲ್ಲಿರುವ ಅಟೋ ಚಾಲಕರೂ ಕಾರುಣ್ಯ ಯಾತ್ರೆಯನ್ನು ಕೈಗೊಂಡು ನಾಡಿಗೆ ಮಾದರಿಯಾಗಿದ್ದಾರೆ ಎಂದರು.
ಗ್ರಾಮಪಂಚಾಯಿತಿ ಸದಸ್ಯರುಗಳಾದ ಶ್ಯಾಮಪ್ರಸಾದ ಮಾನ್ಯ, ಬಾಲಕೃಷ್ಣ ಶೆಟ್ಟಿ ಕಡಾರು, ಸಾಮಾಜಿಕ ಕಾರ್ಯಕರ್ತರಾದ ತಿರುಪತಿ ಕುಮಾರ ಭಟ್, ಹಮೀದ್ ಕೆಡೆಂಜಿ, ಜಗನ್ನಾಥ ರೈ ಪೆರಡಾಲ, ರೋಟರಿ ಕ್ಲಬ್‍ನ ಜಗನ್ನಾಥ ರೈ ಕೊರೆಕ್ಕಾನ, ಕನ್ನಡ ಅಧ್ಯಾಪಕ ಸಂಘಟನೆಯ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಮೊದಲಾದವರು ಮಾತನಾಡಿದರು. ಅಧ್ಯಾಪಕ ನಿರಂಜನ ರೈ ಪೆರಡಾಲ ಸ್ವಾಗತಿಸಿ, ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಸಿನ್ಸಿಯರ್ ಅಟೋ ಚಾಲಕರ ಸಂಘದ ಪ್ರತಿನಿಧಿಗಳಾದ ರಂಜನಾಥ ಶೆಟ್ಟಿ ಕಡಾರು, ಅನಿಲ್ ಕುಮಾರ್, ಅಬ್ದುಲ್ ಕುಞÂ್ಞ, ಸೂಪಿ, ದಯಾನಂದ, ಕಿಶೋರ್ ಸಹಿತ ಸದಸ್ಯರು ಕಾರುಣ್ಯ ಯಾತ್ರೆಗೆ ನೇತೃತ್ವ ವಹಿಸಿದ್ದರು.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅಧ್ಯಾಪಕ :
ಮುಂಡಿತ್ತಡ್ಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಅಧ್ಯಾಪಕನಾಗಿ ದುಡಿಯುತ್ತಿರುವ ಪ್ರಶಾಂತ್ ರೈ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆಯಲ್ಲಿದ್ದಾರೆ. ಅವರ ಚಿಕಿತ್ಸೆಗೆ ವೈದ್ಯರು ಸೂಚಿಸಿರುವ ಪ್ರಕಾರ ಸುಮಾರು 75 ಲಕ್ಷ ರೂ. ವೆಚ್ಚ ತಗುಲಲಿದೆ. ಚಿಕಿತ್ಸೆಗಾಗಿ ಸಮಾಜ ಸೇವಕ ಫಯಾಜ್ ಮಾಡೂರು ಅವರ ನೇತೃತ್ವದಲ್ಲಿ ಹಣ ಸಂಗ್ರಹ ಮಾಡಲಾಗಿದೆ. ಈಗಾಗಲೇ ಸುಮಾರು 65 ಲಕ್ಷದಷ್ಟು ಮೊತ್ತವು ದಾನಿಗಳಿಂದ ಸಂಗ್ರಹವಾಗಿದೆ. ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್‍ನ ಡಾ. ಶರತ್ ದಾಮೋದರನ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನಡೆಯಲಿದ್ದು 74 ಲಕ್ಷ ರೂಪಾಯಿ ಅಗತ್ಯವಿದೆ ಎನ್ನಲಾಗಿದೆ. ಅವರಿಗೆ ನೆರವನ್ನು ನೀಡಲಿಚ್ಚಿಸುವ ದಾನಿಗಳು ಫಲಾನುಭವಿ ಪ್ರಶಾಂತ್ ರೈ ಅವರ ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ 5322500100961501, ಐಎಫ್‍ಸಿ ಕೋಡ್ : ಕೆಎಆರ್‍ಬಿ0000532 ಗೆ ವರ್ಗಾಯಿಸಲು ಕೋರಲಾಗಿದೆ.