HEALTH TIPS

ಮಾನಸಿಕ ಆಘಾತದಿಂದ ಕಂಗೆಟ್ಟಿರುವ ಗಾಝಾದ ಮಕ್ಕಳು; ಯುದ್ಧ ಮುಂದುವರಿದರೆ ದುರಂತದ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ

ಜಿನೆವಾ: ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದಲ್ಲಿ ನೆರವು ಪೂರೈಕೆಗೆ ತಡೆಯ ನಡುವೆ ಹೋರಾಟ ಪುನರಾರಂಭಗೊಂಡಿರುವುದರಿಂದ ಅಲ್ಲಿನ ಸುಮಾರು 1 ದಶಲಕ್ಷ ಮಕ್ಕಳು ಭಾರೀ ಮಾನಸಿಕ ಆಘಾತವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದೆ.

6 ತಿಂಗಳ ಕದನ ವಿರಾಮದ ನಂತರ ಈ ವಾರ ಇಸ್ರೇಲ್ ವೈಮಾನಿಕ ದಾಳಿ ಮತ್ತು ಭೂ ಕಾರ್ಯಾಚರಣೆ ಪುನರಾರಂಭಿಸಿದ ಬಳಿಕ ಗಾಝಾದಲ್ಲಿ ನಾಗರಿಕ ಸಾವು-ನೋವಿನ ಸಂಖ್ಯೆ ಹೆಚ್ಚಿದ್ದು ಆತಂಕಕಾರಿ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಏಜೆನ್ಸಿ ಎಚ್ಚರಿಸಿದೆ. ಈಗಾಗಲೇ ಆಘಾತಕ್ಕೆ ಒಳಗಾಗಿರುವ ಮಕ್ಕಳು ಮತ್ತೊಮ್ಮೆ ಬಾಂಬ್ ದಾಳಿಯ ಭೀತಿಯಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದು ಫೆಲೆಸ್ತೀನಿಯನ್ ಪ್ರದೇಶದಲ್ಲಿ ವಾಸಿಸುತ್ತಿರುವ 1 ದಶಲಕ್ಷ ಮಕ್ಕಳಿಗೆ ಭಾರೀ ಮಾನಸಿಕ ಆಘಾತವಾಗಿದೆ ಎಂದು ಫೆಲಸ್ತೀನಿಯನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿಯ (ಯುಎನ್‌ಆರ್ಡಬ್ಲ್ಯೂಎ) ಕ್ಷೇತ್ರೀಯ ಉಪ ನಿರ್ದೇಶಕ ಸ್ಯಾಮ್ ರೋಸ್ ಹೇಳಿದ್ದಾರೆ.

ಸುಮಾರು 15 ತಿಂಗಳಿಂದ ಮುಂದುವರಿದಿದ್ದ ಯುದ್ಧದಿಂದ ಕಂಗೆಟ್ಟಿದ್ದ ಗಾಝಾದ ಜನತೆಗೆ ಜನವರಿ 19ರಿಂದ ಜಾರಿಗೆ ಬಂದಿದ್ದ ಕದನ ವಿರಾಮ ತುಸು ನೆಮ್ಮದಿ ಒದಗಿಸಿತ್ತು. ಆದರೆ ಮಂಗಳವಾರದಿಂದ ಪುನರಾರಂಭಗೊಂಡಿರುವ ಸಂಘರ್ಷ ಪರಿಸ್ಥಿತಿಯನ್ನು ಮತ್ತೆ ಬಿಗಡಾಯಿಸುವ ಅಪಾಯವಿದೆ. ಜನತೆ ಈಗಾಗಲೇ ದಣಿದಿದ್ದಾರೆ. ಅವರ ರೋಗ ನಿರೋಧಕ ವ್ಯವಸ್ಥೆ, ಮಾನಸಿಕ ಆರೋಗ್ಯ ಹದಗೆಟ್ಟಿದ್ದು ಜನಸಂಖ್ಯೆಯು ಕ್ಷಾಮದ ಅಂಚಿನಲ್ಲಿದೆ. ಸುಮಾರು 18 ತಿಂಗಳು ಶಾಲೆಯಿಂದ ಹೊರಗುಳಿದಿದ್ದ ಮಕ್ಕಳು ಜನವರಿ 19ರ ಬಳಿಕ ಶಾಲೆಗೆ ಮರಳಿದ್ದರೂ ಈಗ ಮತ್ತೆ ಶಿಬಿರಗಳಿಗೆ ಹಿಂತಿರುಗಿದ್ದಾರೆ. ಗಾಝಾದಲ್ಲಿ ಮಕ್ಕಳಿಗೆ ಎದುರಾಗಿರುವ ಪರಿಸ್ಥಿತಿ ಭೀತಿ, ಕ್ರೌರ್ಯ ಮತ್ತು ದುರಂತದ ಪರಾಕಾಷ್ಠೆಯಾಗಿದೆ ಎಂದು ಸ್ಯಾಮ್ ರೋಸ್ ಎಚ್ಚರಿಸಿದ್ದಾರೆ.

ಆಘಾತಕ್ಕೊಳಗಾದ ಮಕ್ಕಳು ಸಾಮಾನ್ಯವಾಗಿ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದಾಗ ಮಾತ್ರ ತಮ್ಮ ಆಘಾತದ ಬಗ್ಗೆ ಪ್ರತಿಕ್ರಿಯಿಸಲು ಆರಂಭಿಸುತ್ತಾರೆ. ಕೆಲವೊಮ್ಮೆ ಸಹಜ ಸ್ಥಿತಿಗೆ ಮರಳಿದ ಬಳಿಕ ಮತ್ತೆ ಪ್ರಾರಂಭವಾಗುತ್ತದೆ ಎಂದು ಮನೋವಿಜ್ಞಾನಿಗಳು ಹೇಳಿದ್ದಾರೆ. ಈ ಪರಿಸ್ಥಿತಿ ಈಗ ಗಾಝಾದಲ್ಲಿದೆ. ಆಧುನಿಕ ಇತಿಹಾಸದಲ್ಲಿ ಗಾಝಾವು ಸಂಪೂರ್ಣ ಮಕ್ಕಳ ಜನಸಂಖ್ಯೆಗೆ ಮಾನಸಿಕ ಆರೋಗ್ಯ ಬೆಂಬಲದ ಅಗತ್ಯವಿರುವ ಏಕೈಕ ಉದಾಹರಣೆಯಾಗಿದೆ ಎಂದವರು ಹೇಳಿದ್ದಾರೆ.

ಕಳೆದ ಮಂಗಳವಾರ ಗಾಝಾದಲ್ಲಿ ಸಂಘರ್ಷ ಪುನರಾರಂಭಗೊಂಡ ಬಳಿಕ ಕನಿಷ್ಠ 504 ಮಂದಿ ಸಾವನ್ನಪ್ಪಿದ್ದು ಇದರಲ್ಲಿ 18 ವರ್ಷಕ್ಕಿಂತ ಕೆಳಹರೆಯದವರ ಸಂಖ್ಯೆ 190ಕ್ಕೂ ಅಧಿಕ ಎಂದು ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ. ಸುಮಾರು 15 ತಿಂಗಳ ಗಾಝಾ ಯುದ್ಧದಲ್ಲಿ ವಿಶ್ವಸಂಸ್ಥೆಯ ಮಾನವೀಯ ನೆರವು ವಿತರಣೆ ಏಜೆನ್ಸಿಯ ಕನಿಷ್ಠ 284 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries