ನವದೆಹಲಿ (PTI): ಕರ್ನಾಟಕದ ಕೆಲವು ಹೋಟೆಲ್‌ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸುವಂತೆ ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ), ಕರ್ನಾಟಕ ಆಹಾರ ಸುರಕ್ಷತೆ ಇಲಾಖೆಗೆ ನಿರ್ದೇಶಿಸಿದೆ.
' ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ವಿಷಯದ ಬಗ್ಗೆ ತಕ್ಷಣವೇ ಗಮನಹರಿಸುವಂತೆ ಮತ್ತು ಆಹಾರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಸುತ್ತಿರುವ ಹೋಟೆಲ್‌ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ' ಎಂದು ಎಫ್‌ಎಸ್‌ಎಸ್‌ಎಐ ಪ್ರಕಟಣೆ ತಿಳಿಸಿದೆ.
'ಪ್ಲಾಸ್ಟಿಕ್‌ನಿಂದ ಹಾನಿಕಾರಕ ರಾಸಾಯನಿಕಗಳು ಆಹಾರಕ್ಕೆ ಸೇರುತ್ತವೆ. ಆದ್ದರಿಂದ, ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದು ಆಹಾರದ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ' ಎಂದು ಹೇಳಿದೆ.
'ಕಡಿಮೆ ಗುಣಮಟ್ಟದ ಅಥವಾ ಫುಡ್ ಗ್ರೇಡ್ ಹೊಂದಿಲ್ಲದ ಪ್ಲಾಸ್ಟಿಕ್ ಅನ್ನು ಹೆಚ್ಚಿನ ಶಾಖಕ್ಕೆ ಒಡ್ಡಿದಾಗ ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್ ಒಳಗೊಂಡಂತೆ ಇತರ ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗಬಹುದು. ಅವು ಆಹಾರಕ್ಕೆ ಸೇರಿಕೊಂಡರೆ, ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು' ಎಂದು ಎಫ್‌ಎಸ್‌ಎಸ್‌ಎಐ ಸಿಇಒ ಜಿ.ಕಮಲಾ ವರ್ಧನ್ ರಾವ್ ಹೇಳಿದ್ದಾರೆ.