ಪೋರ್ಟ್ ವಿಲಾ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ಅವರ ಪಾಸ್‌ಪೋರ್ಟ್ ರದ್ದುಪಡಿಸುವಂತೆ ವನವಾಟು ಪ್ರಧಾನಮಂತ್ರಿ ಜೋಥಮ್ ನಾಪೆಟ್ ಅವರು ಸೋಮವಾರ ಪೌರತ್ವ ಆಯೋಗಕ್ಕೆ ಸೂಚಿಸಿದ್ದಾರೆ.
'ಲಲಿತ್ ಮೋದಿ ಅವರು ಗಡೀಪಾರಾಗುವುದನ್ನು ತಪ್ಪಿಸಲು ವನವಾಟು ಪೌರತ್ವ ಪಡೆದುಕೊಂಡಿದ್ದಾರೆ' ಎಂದು ಅವರು ಹೇಳಿದ್ದಾರೆ.
'ಲಲಿತ್ ಮೋದಿ ವಿರುದ್ಧ ಎಚ್ಚರಿಕೆ ನೋಟಿಸ್ ಹೊರಡಿಸಬೇಕೆಂಬ ಭಾರತೀಯ ಅಧಿಕಾರಿಗಳ ಮನವಿಯನ್ನು ಇಂಟರ್‌ಪೋಲ್ ಎರಡು ಬಾರಿ ತಿರಸ್ಕರಿಸಿದೆ ಎಂಬುದು ಇದೀಗ ತಿಳಿದುಬಂದಿದೆ. ಅಂತಹ ಯಾವುದೇ ಎಚ್ಚರಿಕೆಯು ಲಲಿತ್ ಮೋದಿ ಅವರ ಪೌರತ್ವವನ್ನು ಸ್ವಯಂ ಚಾಲಿತವಾಗಿ ರದ್ದುಗೊಳಿಸುತ್ತದೆ' ಎಂದು ರಿಪಬ್ಲಿಕ್ ಆಫ್ ವನವಾಟು ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
'ವನವಾಟು ಪೌರತ್ವ ಹೊಂದುವುದು ಒಂದು ಸವಲತ್ತೆ ಹೊರತು ಹಕ್ಕಲ್ಲ. ಅರ್ಜಿದಾರರು ಕಾನೂನುಬದ್ಧ ಕಾರಣಗಳಿಗಾಗಿ ಪೌರತ್ವ ಪಡೆದುಕೊಳ್ಳಬೇಕು' ಎಂದು ತಿಳಿಸಿದೆ.
ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರೂಪಾಯಿಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ, ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ.
ಮಾರ್ಚ್ 7ರಂದು ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಒಪ್ಪಿಸಲು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಲಲಿತ್ ಮೋದಿ ಅರ್ಜಿ ಸಲ್ಲಿಸಿದ್ದರು.