ಗಾಜಿಯಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ ಆರೋಪದ ಮೇಲೆ ದಾಸ್ನಾ ದೇವಾಲಯದ ಯತಿ ನರಸಿಂಹಾನಂದ ಗಿರಿ ಸ್ವಾಮೀಜಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರಸಿಂಹಾನಂದ ಗಿರಿ ಸ್ವಾಮೀಜಿ ವಿರುದ್ಧ ಉಪ ಪೊಲೀಸ್ ಆಯುಕ್ತ ಸುರೇಂದ್ರ ನಾಥ್ ತಿವಾರಿ ಅವರು ವೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸ್ವಾಮೀಜಿ ಹೇಳಿಕೆಗಳು ಕೋಮು ಸಾಮರಸ್ಯ ಕೆರಳಿಸುವ ಉದ್ದೇಶವನ್ನು ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ವಾಮೀಜಿ ಅವರು ಮಹಾತ್ಮ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮೂಲಕ ಕ್ರಿಮಿನಲ್ ಬೆದರಿಕೆ ಹಾಕಿದ್ದಾರೆ ಎಂದು ಸುರೇಂದ್ರ ಹೇಳಿದ್ದಾರೆ.
ಸ್ವಾಮೀಜಿ ಅವರು ಮಾತನಾಡಿರುವ ವಿಡಿಯೊದಲ್ಲಿ ಗಾಜಿಯಾಬಾದ್ ಪೊಲೀಸ್ ಆಯುಕ್ತ ಮತ್ತು ಲೋನಿಯ ಸಹಾಯಕ ಪೊಲೀಸ್ ಆಯುಕ್ತರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದೂ ಸುರೇಂದ್ರ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.