ಹೈದರಾಬಾದ್: ಭಾರತದಿಂದ ರಫ್ತು ಆಗಲಿರುವ ಔಷಧ ಉತ್ಪನ್ನಗಳಿಗೆ ಭಾರತಕ್ಕೆ ಸರಿ ಸಮಾನವಾಗಿ ಸುಂಕವನ್ನು ವಿಧಿಸುವ ಅಮೆರಿಕದ ನಿಲುವಿನ ಕುರಿತು ರಾಜ್ಯಸಭೆ ಸದಸ್ಯ, ತೆಲಂಗಾಣದ ಬಿ.ಪಾರ್ಥಸಾರಥಿ ರೆಡ್ಡಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದ ಪ್ರಮುಖ ಆರ್ಥಿಕ ವಲಯದ ಮೇಲೆ ಉದ್ದೇಶಿತ ಸುಂಕವು ಪ್ರತಿಕೂಲ ಪರಿಣಾಮ ಬೀರಲಿದೆ.
ವಿದೇಶಿ ವಿನಿಮಯ ಗಳಿಕೆಗೆ ಧಕ್ಕೆ ಉಂಟು ಮಾಡುವ ಜೊತೆಗೆ ಲಕ್ಷಾಂತರ ಉದ್ಯೋಗಿಗಳ ಮೇಲೂ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, 'ದೇಶದಿಂದ ರಫ್ತುಗೊಳ್ಳುವ ಔಷಧ ಉತ್ಪನ್ನಗಳಲ್ಲಿ ಶೇ 31ರಷ್ಟು ಅಮೆರಿಕಕ್ಕೆ ಹೋಗಲಿದೆ. 2023-24ರಲ್ಲಿ ಸುಮಾರು 74 ಸಾವಿರ ಕೋಟಿ ವಹಿವಾಟು ಆಗಿದೆ. ಸುಂಕ ಏರಿಕೆ ಈ ವಹಿವಾಟನ್ನು ಅಸ್ತವ್ಯಸ್ತಗೊಳಿಸಲಿದೆ' ಎಂದರು.
ಬಿಆರ್‌ಎಸ್ ಪಕ್ಷದ ಪ್ರತಿನಿಧಿಯಾದ ಅವರು ಹೆಟೆರೊ ಫಾರ್ಮಾ ಕಂಪನಿಯ ಮಾಲೀಕರು ಆಗಿದ್ದಾರೆ. ಕೇಂದ್ರ ಸರ್ಕಾರವು ಈ ವಿಷಯದತ್ತ ತುರ್ತು ಗಮನಹರಿಸಬೇಕು ಹಾಗೂ ಆದ್ಯತೆಯ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.