ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ವಿಷಯವೊಂದನ್ನು ಪ್ರಕಟಿಸಿದ ವ್ಯಕ್ತಿಗೆ ನೋಟಿಸ್ ನೀಡದೆಯೂ ಆ ವಿಷಯವನ್ನು ತಡೆಹಿಡಿಯುವುದಕ್ಕೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮಾಹಿತಿ ತಂತ್ರಜ್ಞಾನ ನಿಯಮ-2009ರಲ್ಲಿನ 16ನೆಯ ನಿಯಮವನ್ನು ರದ್ದುಪಡಿಸಬೇಕು ಎಂಬ ಕೋರಿಕೆಯು ಅರ್ಜಿಯಲ್ಲಿದೆ.
ಅರ್ಜಿದಾರ ಸಂಸ್ಥೆ 'ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್' ಪರವಾಗಿ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, 'ಮಾಹಿತಿಯನ್ನು ಬಿತ್ತರಿಸಿದ ಮೂಲ ವ್ಯಕ್ತಿಗೆ ನೋಟಿಸ್ ನೀಡಿರಲಿಲ್ಲ. 'ಎಕ್ಸ್'ನಂತಹ ವೇದಿಕೆಗಳಿಗೆ ಮಾತ್ರ ನೋಟಿಸ್ ನೀಡಲಾಗಿತ್ತು' ಎಂದು ತಿಳಿಸಿದರು.
'ಮಾಹಿತಿಯನ್ನು ತಡೆಹಿಡಿಯುವ ಅಧಿಕಾರವು ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆ ಅರ್ಜಿಯಲ್ಲಿಲ್ಲ. ಆದರೆ, ಮಾಹಿತಿಯನ್ನು ತಡೆಹಿಡಿಯುವಾಗ ಆ ಮಾಹಿತಿಯನ್ನು ಬಹಿರಂಗಪಡಿಸಿದ ವ್ಯಕ್ತಿಗೆ ನೋಟಿಸ್ ನೀಡಬೇಕಾಗಿತ್ತು' ಎಂದು ಇಂದಿರಾ ವಾದಿಸಿದರು.