ಪಟ್ಟಣಂತಿಟ್ಟ: ಅಯ್ಯಪ್ಪ ದೇವಸ್ಥಾನವನ್ನು ಪ್ರವೇಶಿಸುವಾಗ ಪುರುಷರು ಅಂಗಿ ತೆಗೆಯುವ ಪದ್ಧತಿಯನ್ನು ವಿರೋಧಿಸುವ ಗುಂಪೊಂದು, ಭಾನುವಾರ ಅಂಗಿ ಕಳಚದೆಯೇ ದೇವಸ್ಥಾನ ಪ್ರವೇಶಿಸಿದೆ..
ಎಸ್‌ಎನ್‌ಡಿಪಿ ಸಂಯುಕ್ತ ಸಮರ ಸಮಿತಿಯ ಸದಸ್ಯರು ತಮ್ಮ ಅಂಗಿಯನ್ನು ಕಳಚದೆಯೇ ಪ್ರಾರ್ಥಿಸಿದ ದೃಶ್ಯ ಇರುವ ವಿಡಿಯೊಗಳು ಬಹಿರಂಗ ಆಗಿವೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಾಗಲಿ, ಪೊಲೀಸರಾಗಲಿ ಆಕ್ಷೇಪ ವ್ಯಕ್ತಪಡಿಸಲಿಲ್ಲ. ನಂತರದಲ್ಲಿ, ಅಂಗಿ ತೆಗೆಯಬೇಕು ಎಂಬ ಪದ್ಧತಿಯನ್ನು ಕೈಬಿಡಬೇಕು ಎಂದು ಈ ಪ್ರತಿಭಟನಕಾರರು ಆಗ್ರಹಿಸಿದರು.
'ಪ್ರತಿಭಟನೆ ಶಾಂತಿಯುತವಾಗಿತ್ತು. ಅಂಗಿ ತೆಗೆಯದೆ ದೇವಸ್ಥಾನವನ್ನು ಯಾರಾದರೂ ಪ್ರವೇಶಿಸಿದರೆ ತನ್ನ ಆಕ್ಷೇಪ ಇಲ್ಲ ಎಂದು ಆಡಳಿತ ಮಂಡಳಿ ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ಭಕ್ತರು ಅಂಗಿ ತೆಗೆಯುವ ಪದ್ಧತಿಯನ್ನು ಪಾಲಿಸುತ್ತಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಸಮಾಜ ಸುಧಾರಕ ನಾರಾಯಣ ಗುರುಗಳು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರು, ಅಂಗಿ ಕಳಚುವ ಈ ಪದ್ಧತಿಯು ಸಾಮಾಜಿಕ ಕೆಡುಕು ಎಂದು ಹೇಳಿದ್ದರು. ಈ ಪದ್ಧತಿಯನ್ನು ಇಲ್ಲವಾಗಿಸಬೇಕು ಎಂದು ಅವರು ಕಳೆದ ವರ್ಷ ಹೇಳಿದ್ದರು.