ಮಂಜೇಶ್ವರ: 2024 ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಅಂಗನವಾಡಿ ಕಾರ್ಯಕರ್ತೆಯರಿಗಿರುವ ಪ್ರಶಸ್ತಿಯನ್ನು ಪಡೆದು ಅತ್ಯುತ್ತಮ ಅಂಗನವಾಡಿ ಶಿಕ್ಷಕಿ ಎಂಬ ಗೌರವವನ್ನು ಮೀಂಜ ಗ್ರಾಮ ಪಂಚಾಯತಿ ಕೋಳ್ಯೂರು ವಾರ್ಡ್ ನ ದೈಗೋಳಿ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಅವರು ಪಡೆದಿರುತ್ತಾರೆ. ಮಾರ್ಚ್ 8 ರಂದು ತಿರುವನಂತಪುರದಲ್ಲಿ ಜರಗಿದ ಸಮಾರಂಭದಲ್ಲಿ ಕೇರಳ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆÀ ರೋಸಾಕುಟ್ಟಿ ಕೆ.ಸಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ದೈಗೋಳಿ ಅಡೆಕಳಕಟ್ಟೆ ನಿವಾಸಿಯಾದ ವಿಶಾಲಾಕ್ಷಿ ಅವರು ಕಳೆದ 27 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ದೈಗೋಳಿ ಜ್ಞಾನೋದಯ ಸಮಾಜ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಜ್ಞಾನೋದಯ ಸಮಾಜ ಅಭಿನಂದನೆಗಳನ್ನು ಸಲ್ಲಿಸಿದೆ.