ಚಂಡೀಗಢ: ಸಂಯುಕ್ತ ಕಿಸಾನ್ ಮೋರ್ಚಾ(SKM) ಬ್ಯಾನರ್ ಅಡಿಯಲ್ಲಿ ಬುಧವಾರ 'ಚಂಡೀಗಢ ಚಲೋ' ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರನ್ನು ದಾರಿ ಮಧ್ಯೆಯೇ ಪಂಜಾಬ್ ಪೊಲೀಸರು ತಡೆದಿದ್ದು, ಎಂಟ್ರಿ ಪಾಯಿಂಟ್ ಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ರೈತರ ಚಂಡೀಗಢ ಚಲೋ ಹಿನ್ನೆಲೆಯಲ್ಲಿ ಪಂಜಾಬ್‌ನಾದ್ಯಂತ ಹಲವಾರು ಬ್ಯಾರಿಕೇಡ್‌ಗಳು ಮತ್ತು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಹಲವಾರು ರೈತ ನಾಯಕರನ್ನು ಬಂಧಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪರಿಣಾಮ ಹೆದ್ದಾರಿಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ.
ಇಂದು ಬೆಳಗ್ಗೆ ಟ್ರ್ಯಾಕ್ಟರ್-ಟ್ರಾಲಿಗಳು ಮತ್ತು ಇತರ ವಾಹನಗಳಲ್ಲಿ ಚಂಡೀಗಢಕ್ಕೆ ಹೊರಟ ರೈತರನ್ನು ಪಂಜಾಬ್ ಪೊಲೀಸರು ಅನೇಕ ಸ್ಥಳಗಳಲ್ಲಿ ತಡೆದರು. ರಾಜ್ಯ ಪೊಲೀಸರು ಹಲವು ಕಡೆ ರೈತರನ್ನು ತಡೆಯಲು ಹೆದ್ದಾರಿಗಳಲ್ಲಿ ಟಿಪ್ಪರ್‌ಗಳನ್ನು ಅಡ್ಡವಾಗಿ ನಿಲ್ಲಿಸಿದ್ದರು.
ಹೆದ್ದಾರಿಗಳನ್ನು ಬಂದ್ ಮಾಡಿದರೆ ನಾವು ಗ್ರಾಮೀಣ ರಸ್ತೆಗಳ ಮೂಲಕ ಚಂಡೀಗಢ ತಲುಪಲು ಪ್ರಯತ್ನಿಸುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ರಾಜ್ಯದ ಅತಿದೊಡ್ಡ ರೈತ ಸಂಘವಾದ BKU ಏಕ್ತಾ-ಉಗ್ರಹಣ್‌ನ ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಾನ್ ಅವರನ್ನು ಸಂಗ್ರೂರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. "ಅವರನ್ನು ಘರಾಚೋನ್ ಗ್ರಾಮದ ಬಳಿ ಬಂಧಿಸಿ ಚಾಜ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು" ಎಂದು ಉಗ್ರಾನ್ ಆಪ್ತ ಜಗ್ತಾರ್ ಕಲಾಜರ್ ಅವರು ಹೇಳಿದ್ದಾರೆ.