ನವದೆಹಲಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಅವರು ನಾಲ್ಕು ತಿಂಗಳುಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಪಂಜಾಬ್ ಸರ್ಕಾರವು ಶುಕ್ರವಾರ ತಿಳಿಸಿದೆ.
ಈ ಸಂದರ್ಭದಲ್ಲಿ ರೈತರ ವಿವಿಧ ಬೇಡಿಕೆಗಳಿಗಾಗಿ ನಾಲ್ಕು ತಿಂಗಳಿನಿಂದ ನಿರಶನ ಕೈಗೊಂಡ ಜಗಜಿತ್ ಸಿಂಗ್ ಡಲ್ಲೇವಾಲ್ ಅವರು ಯಾವುದೇ ರಾಜಕೀಯ ಕಾರ್ಯಸೂಚಿ ಹೊಂದಿಲ್ಲದ ಅಪ್ಪಟ ರೈತ ನಾಯಕ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ.
ಈ ಸಂಬಂಧ ಶುಕ್ರವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರು ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಪಂಜಾಬ್ ವಕೀಲ (ಎ.ಜಿ) ಗುರ್ಮಿಂದರ್ ಸಿಂಗ್, ಶಂಭು ಮತ್ತು ಖನೌರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಚದುರಿಸಲಾಗಿದೆ. ಎಲ್ಲ ರಸ್ತೆಗಳು ಮತ್ತು ಹೆದ್ದಾರಿಗಳನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಲ್ಲೇವಾಲ್ ಅವರನ್ನು ಕೊಂಡಾಡಿದ ಸುಪ್ರೀಂ ಕೋರ್ಟ್, 'ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಕೃಷಿಕ ಸಮಾಜ ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿದ ಪ್ರಾಮಾಣಿಕ ರೈತ ನಾಯಕ. ರೈತರ ಸಮಸ್ಯೆಗಳನ್ನು ಪರಿಹರಿಸುವುದು ಕೆಲವು ವ್ಯಕ್ತಿಗಳ ಉದ್ದೇಶವಾಗಿರುವುದಿಲ್ಲ. ನಾವೇನು ದಂತ ಗೋಪುರದಲ್ಲಿ ಕುಳಿತಿಲ್ಲ. ನಮಗೆ ಎಲ್ಲ ವಿಚಾರವೂ ಗೊತ್ತಾಗುತ್ತದೆ' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್