ನವದೆಹಲಿ: ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವು ಪರಸ್ಪರರ ವಿರುದ್ಧವಾಗಿರುವ ಅಂಗಗಳಲ್ಲ; ಇವು ತಮ್ಮ ಮಿತಿಗಳೊಳಗೆ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು ಎಂದು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಹೇಳಿದ್ದಾರೆ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯ ಬಗ್ಗೆ ಉಲ್ಲೇಖಿಸಿ ಧನಕರ್ ಅವರು ರಾಜ್ಯಸಭೆಯಲ್ಲಿ ಸೋಮವಾರ, ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸದೆ ಇದ್ದಿದ್ದರೆ 'ಪರಿಸ್ಥಿತಿ ಬೇರೆಯದೇ ಆಗಿರುತ್ತಿತ್ತು' ಎಂದು ಹೇಳಿದ್ದರು.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನೋಟುಗಳ ಕಂತೆಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ವರದಿಗಳು ಬಂದ ನಂತರ ರಾಜ್ಯಸಭೆಯಲ್ಲಿ ಎನ್‌ಜೆಎಸಿ ಬಗ್ಗೆ ಪ್ರಸ್ತಾಪ ಆಗಿತ್ತು.
ನೋಟು ಪತ್ತೆ ನಂತರದ ವಿದ್ಯಮಾನಗಳ ಬಗ್ಗೆ ಹಾಗೂ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಧನಕರ್ ಅವರು ವಿವಿಧ ಪಕ್ಷಗಳ ಮುಖಂಡರ ಸಭೆ ಕರೆದಿದ್ದರು. 'ಸಾರ್ವಜನಿಕರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಿರುವ ಸಂಗತಿಯ ವಿಚಾರವಾಗಿ ನಾವು ಸೋಮವಾರ ಬಹಳ ಫಲಪ್ರದವಾದ ಮಾತುಕತೆ ನಡೆಸಿದೆವು' ಎಂದು ಧನಕರ್ ಮಂಗಳವಾರ ಹೇಳಿದ್ದಾರೆ.
ಸಭೆಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಅವರು ಹಂಚಿಕೊಂಡಿಲ್ಲ. ಸಭಾನಾಯಕ ಜೆ.ಪಿ. ನಡ್ಡಾ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಭಾಗಿಯಾಗಿದ್ದರು.
ಪೊಲೀಸ್ ತಂಡ ಭೇಟಿ: ನೋಟುಗಳ ಕಂತೆ ದೊರೆತ ಪ್ರಕರಣದ ತನಿಖೆಯ ಭಾಗವಾಗಿ ನವದೆಹಲಿಯ ಡಿಸಿಪಿ ನೇತೃತ್ವದ ಪೊಲೀಸ್ ತಂಡವೊಂದು ನ್ಯಾಯಮೂರ್ತಿ ವರ್ಮಾ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ನಿವಾಸಕ್ಕೆ ಮಧ್ಯಾಹ್ನ 1.50ರ ಸುಮಾರಿಗೆ ಬಂದ ತಂಡವು, ಎರಡು ತಾಸುಗಳ ನಂತರ ಅಲ್ಲಿಂದ ತೆರಳಿದೆ. ಅಲ್ಲಿಂದ ತಂಡವು ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ತೆರಳಿತು.
ಅರ್ಜಿ ವಿಚಾರಣೆಗೆ ಒಪ್ಪಿಗೆ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಬೇಕು ಎಂಬ ಕೋರಿಕೆ ಇರುವ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿದೆ. ವಕೀಲ ಮ್ಯಾಥ್ಯೂಸ್ ಜೆ. ನೆಡುಂಪರ ಅವರ ನೇತೃತ್ವದಲ್ಲಿ ಅರ್ಜಿ ಸಲ್ಲಿಸಲಾಗಿದೆ. 'ಇದು ನ್ಯಾಯವನ್ನು ಮಾರಾಟ ಮಾಡಿ ಸಂಗ್ರಹಿಸಿದ ಕಪ್ಪುಹಣವನ್ನು ಇರಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಕರಣ. ನ್ಯಾಯಮೂರ್ತಿ ವರ್ಮ ಅವರ ಮಾತನ್ನು ನಂಬುವುದಾದರೂ ಅವರು ಎಫ್‌ಐಆರ್ ಏಕೆ ದಾಖಲಿಸಲಿಲ್ಲ ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ. ಈ ಪ್ರಕರಣದಲ್ಲಿ ತಡವಾಗಿಯಾದರೂ ಎಫ್‌ಐಆರ್ ದಾಖಲಿಸುವುದು ಅಗತ್ಯ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.