ನವದೆಹಲಿ: ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ ಪರಿಹಾರ ಮತ್ತು ರಕ್ಷಣಾ ಕೆಲಸಗಳಿಗಾಗಿ ಎನ್‌ಡಿಆರ್‌ಎಫ್‌ನ(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ) 80 ಸಿಬ್ಬಂದಿಯನ್ನು ಕಳುಹಿಸಲು ಭಾರತ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
'ಆಪರೇಷನ್ ಬ್ರಹ್ಮ' ಹೆಸರಿನಲ್ಲಿ ಎನ್‌ಡಿಆರ್‌ಎಫ್ ತಂಡ ನೆರೆಯ ದೇಶದಲ್ಲಿ ರಕ್ಷಣಾ ಕಾರ್ಯ ನಿರ್ವಹಿಸಲಿದೆ.
'ಶನಿವಾರ ಸಂಜೆ ಎನ್‌ಡಿಆರ್‌ಎಫ್ ತಂಡ ಮ್ಯಾನ್ಮಾರ್‌ಗೆ ತಲುಪಲಿದೆ. 8ನೇ ಎನ್‌ಡಿಆರ್ ಬೆಟಾಲಿಯನ್‌ನ ಕಮಾಂಡೆಂಟ್ ಪಿ. ಕೆ. ತಿವಾರಿ ಅವರು ತಂಡದ ನೇತೃತ್ವ ವಹಿಸಲಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಪಾರ ಹಾನಿಯಾಗಿದೆ. ಭೂಕಂಪದ ತೀವ್ರತೆಗೆ ಬಹು ಅಂತಸ್ತಿನ ಕಟ್ಟಡಗಳು, ಸೇತುವೆಗಳು ನೆಲಕ್ಕುರುಳಿವೆ.
ಭಾರತವು ವಿದೇಶಕ್ಕೆ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ನೇಪಾಳದಲ್ಲಿ ಮತ್ತು 2023ರಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ವೇಳೆ ಎನ್‌ಡಿಆರ್‌ಎಫ್ ತಂಡ ಅಲ್ಲಿಗೆ ತೆರಳಿತ್ತು.