ಸೇನ್‌ಹಾನ್: 'ಯಾವ ದೇಶದ ಜಲಗಡಿ ವ್ಯಾಪ್ತಿಗೂ ಒಳಪಡದ ಅಂತರರಾಷ್ಟ್ರೀಯ ಸಾಗರ ಜಲಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಬಗ್ಗೆ ಅನುಮತಿ ನೀಡಿ ಎಂದು ನಾವು ಅಮೆರಿಕವನ್ನು ಕೋರಿದ್ದೇವೆ' ಎಂದು ಕೆನಡಾದ 'ದಿ ಮೆಟಲ್ಸ್ ಕಂಪನಿ'ಯು ಹೇಳಿಕೆ ಬಿಡುಗಡೆ ಮಾಡಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಾಗರ ಪ್ರಾಧಿಕಾರವು (ಐಎಸ್‌ಎ) ಸಿಟ್ಟಿಗೆದ್ದಿದೆ.
ಅಂತರರಾಷ್ಟ್ರೀಯ ಸಮುದ್ರದಾಳವನ್ನು ರಕ್ಷಿಸುವ ಸಲುವಾಗಿ ಸಾಗರ ಪ್ರಾಧಿಕಾರವನ್ನು ವಿಶ್ವಸಂಸ್ಥೆಯು 1994ರಲ್ಲಿ ಸ್ಥಾಪಿಸಿತ್ತು. ಈ ಪ್ರಾಧಿಕಾರದ ಕೇಂದ್ರ ಕಚೇರಿಯು ಜಮೈಕಾದಲ್ಲಿದೆ. ಅಂತರರಾಷ್ಟ್ರೀಯ ಸಾಗರ ಜಲದಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಅನುಮತಿ ಕೇಳಿ ಕಂಪನಿಯು ಪ್ರಾಧಿಕಾರಕ್ಕೂ ಮನವಿ ಸಲ್ಲಿಸಿದೆ. ಇದೇ ವೇಳೆ ಅಮೆರಿಕ ಸರ್ಕಾರದ ಬಳಿಯೂ ಅನುಮತಿ ಕೇಳಿದೆ.
ಶುಕ್ರವಾರ ಅಂತರರಾಷ್ಟ್ರೀಯ ಸಾಗರ ಪ್ರಾಧಿಕಾರದ ಸದಸ್ಯರ ಸಭೆ ನಡೆದಿತ್ತು. ಗಣಿಗಾರಿಕೆ ನಡೆಸಲು ಕಂಪನಿಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಇದಕ್ಕೂ ಮೊದಲೇ 'ಕಂಪನಿಯು ಅಮೆರಿಕದೊಂದಿಗೆ ಚರ್ಚೆ ನಡೆಸುತ್ತಿದ್ದೇವೆ' ಎಂಬ ಹೇಳಿಕೆ ಬಿಡುಗಡೆ ಮಾಡಿದೆ.
ಇದು ಪ್ರಾಧಿಕಾರದ ಸದಸ್ಯರನ್ನು ಕೆರಳಿಸಿದೆ. 'ಇದು ಪ್ರಾಧಿಕಾರಕ್ಕೆ ಎಸಗುತ್ತಿರುವ ಅಪಮಾನ' ಎಂದು ಸದಸ್ಯರು ಕಿಡಿಕಾರಿದ್ದಾರೆ. ಪ್ರಾಧಿಕಾರಕ್ಕೆ 165 ರಾಷ್ಟ್ರಗಳು ಅನುಮೋದನೆ ನೀಡಿವೆ.
'ಅಮೆರಿಕವು ಸಾಗರ ಪ್ರಾಧಿಕಾರದ ಸದಸ್ಯ ರಾಷ್ಟ್ರವಲ್ಲ. ಈ ಪ್ರಾಧಿಕಾರವನ್ನು ಅಮೆರಿಕ ಅನುಮೋದಿಸಿಲ್ಲ. ಸಮುದ್ರದಲ್ಲಿ ಗಣಿಗಾರಿಕೆ ಮಾಡಬಾರದು ಎಂಬ ನಿಮಯ ಅಮೆರಿಕದಲ್ಲಿ ಇಲ್ಲ. ಆದ್ದರಿಂದ ಅಮೆರಿಕವು ನಮಗೆ ಅನುಮತಿ ನೀಡಲಿದೆ' ಎಂದು ಕಂಪನಿ ವಾದಿಸಿದೆ.