ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಪುನ:ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಮೂಡಪ್ಪಸೇವೆಗೆ ಸಿದ್ಧಗೊಳ್ಳುತ್ತಿರುವ ಮಧ್ಯೆ ಮೂಲಸ್ಥಾನದಲ್ಲೂ ಅಭಿವೃದ್ಧಿಕಾರ್ಯಗಳು ಬಿರುಸಿನಿಂದ ಸಾಗುತ್ತಿದೆ.
ಮಧೂರು ದೇಗುಲದಿಂದ ಕಾಸರಗೋಡು ಹಾದಿಯಲ್ಲಿ ಒಂದುವರೆ ಕಿ.ಮೀ ದೂರದ ಉಳಿಯತ್ತಡ್ಕದಲ್ಲಿರುವ ಮೂಲಸ್ಥಾನದಲ್ಲಿ ಶ್ರೀಮದರು ಮಾತೆ ಮಂಟಪ, ಮದರುಮಾತೆಯ ಆರಾಧ್ಯ ದೈವ ಪಂಜುರ್ಲಿ ಸ್ಥಾನ, ಶ್ರೀದೇವರ ಕಟ್ಟೆಗಳೂ ಜೀರ್ಣೋದ್ಧಾರದ ಹಂತದಲ್ಲಿದೆ. ಹುಲ್ಲು ಸಂಗ್ರಹಿಸುತ್ತಿರುವ ಮಧ್ಯೆ ಪರಿಶಿಷ್ಟ ಜಾತಿ ಸಮುದಾಯದ ಮದರು ಎಂಬ ಮಹಿಳೆಗೆ ಮಧೂರು ಶ್ರೀ ಮದನಂತೇಶ್ವರನ ಲಿಂಗ ಲಭಿಸಿದ ಕುಳೋವುತ್ತಡ್ಕ ಎಂಬ ಪ್ರದೇಶ ಇಂದು ಉಳಿಯತ್ತಡ್ಕ ಎಂಬುದಾಗಿ ಕರೆಯಲ್ಪಡುತ್ತಿದೆ. ಮದರು ಅವರಿಂದಗಿಯೇ ಮಧೂರು ಹೆಸರು ಬಂದಿರುವುದಾಗಿಯೂ ಇತಿಹಾಸವಿದೆ. ಮಧೂರು ದೇಗುಲದ ಮೂಲಸ್ಥಾನ ಕುಳೋವುತ್ತಡ್ಕದಲ್ಲಿ ಲಿಂಗ ಲಭಿಸಿದ ಅದಷ್ಟು ಜಾಗ ಕಡು ಬೇಸಿಗೆಯಲ್ಲೂ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಲಿಂಗ ಲಭಿಸಿದ ಅನತಿ ದೂರದಲ್ಲಿ ಕೆರೆಯೊಂದು ಇಂದಿಗೂ ಅಸ್ತಿತ್ವದಲ್ಲಿದೆ. ಇದರ ಅಭಿವೃದ್ಧಿಯೂ ನಡೆಯಬೇಕಾಗಿದೆ. ಸುಮಾರು ನಾಲ್ಕು ಎಕರೆ ವಿಸ್ತೀರ್ಣದಲ್ಲಿರುವ ಉಳಿಯತ್ತಡ್ಕದ ಮೂಲಸ್ಥಾನದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿಲ್ಲ. ಎಂಬುದು ಭಕ್ತಾದಿಗಳ ಅಭಿಪ್ರಾಯವಾಗಿದೆ. ಮದರುಮಾತೆಗೆ ಸೂಕ್ತ ಗುಡಿ ನಿರ್ಮಿಸಿ, ಅಗತ್ಯ ಪ್ರಾಶಸ್ತ್ಯ ನೀಡುವಂತೆ ಮದರು ಮಹಾಮಾತೆ ಮೊಗೇರ ಸಂಘ 2017ರಿಂದಲೇ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಕೊನೆಗೂ ಹೋರಾಟ ಫಲಕಂಡಿದೆ. ಮೂಲಸ್ಥಾನದಲ್ಲಿ ಅಭಿವೃದ್ಧಿಕಾರ್ಯಗಳು ಪ್ರಗತಿಯಲ್ಲಿದೆ. ಜತೆಗೆ ಮೂಲಸ್ಥಾನದ ಪ್ರವೇಶ ಭಾಗದಲ್ಲಿ ಮಹಾದ್ವಾರವೊಂದನ್ನು ಮದರು ಮಹಾಮಾತೆ ಮೊಗೇರ ಸಂಘ ನಿರ್ಮಿಸಿಕೊಡುತ್ತಿದ್ದು, ಇದರ ಕಾಮಗಾರಿಯೂ ಭರದಿಂದ ಸಾಗುತ್ತಿದೆ.
ಇನ್ನು ಮಧೂರು ದೇಗುಲದಲ್ಲೂ ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ನಡೆಯುತ್ತಿದೆ. ಒಂದೆಡೆ ಭಕ್ತಾದಿಗಳು ಶುಚೀಕರಣದಲ್ಲಿ ತೊಡಗಿಸಿಕೊಂಡಿದ್ದರೆ, ಇನ್ನೊಂದೆಡೆ ದೇಗುಲದೊಳಗಿನ ಪೇಂಟಿಂಗ್ ಕೆಲಸವನ್ನೂ ಸ್ವಯಂಸೇವಕರು ನಡೆಸುತ್ತಿದ್ದಾರೆ. ಬಹುತೇಕ ಕೆಲಸಗಳು ಶ್ರಮದಾನದ ಮೂಲಕವೇ ನಡೆಸಲಾಗುತ್ತಿದೆ. ಸೀಮೆ ದೇಗುಲದ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವಾ ಕಾರ್ಯಕ್ರಮವನ್ನು ನಾಡಿನ ಉತ್ಸವವಾಗಿ ಆಚರಿಸಲು ಜನತೆ ಸನ್ನದ್ಧರಾಗಿದ್ದಾರೆ. ಮಂಜೇಶ್ವರದಿಂದ ನೀಲೇಶ್ವರ ವರೆಗೂ ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗಿದ್ದು, ಈ ಮೂಲಕ ಕೆಲಸಕಾರ್ಯಗಳು ನಡೆಯುತ್ತಿದೆ. ಕಾರ್ಯಕ್ರಮ ನಡೆಯುವ ವೇದಿಕೆ, ಸಭಾ ಕಾರ್ಯಕ್ರಮಗಳ ಚಪ್ಪರ ನಿರ್ಮಾಣವೂ ಪ್ರಗತಿಯಲ್ಲಿದೆ. ವಾಹನ ನಿಲುಗಡೆಗಾಗಿ ವಿವಿಧೆಡೆ ವ್ಯವಸ್ಥೆ ನಡೆಸಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ನಾಲ್ಕೂ ದಿಕ್ಕುಗಳಲ್ಲಿನ ರಸ್ತೆ ಅಂಚಿಗೆ ತಳಿರುತೋರಣಗಳಿಂದ ಶೃಂಗರಿಸುವ ಕೆಲಸ ಸ್ವಯಂಸೇವಕರು ನಡೆಸುತ್ತಿದ್ದಾರೆ. ಪ್ರಚಾರ, ಆರ್ಥಿಕ, ಸ್ವಯಂಸೇವಕ, ಚಪ್ಪರ ಸೇರಿದಂತೆ ಹಲವಾರು ಸಮಿತಿಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದೆ. ಮಾ. 26ರಂದು ಕೊಡುಗೈ ದಾನಿ, ಉದ್ಯಮಿ ಕುಳೂರುಕನ್ಯಾನ ಸದಾಶಿವ ಶೆಟ್ಟಿ ಕೊಡುಗೆಯಗಿ ನೀಡಿರುವ ಭವ್ಯ ಶಿಲಾಮಯ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮದೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಗೆ ಅಧಿಕೃತ ಚಾಲನೆ ಲಭಿಸಲಿದೆ.