ನವದೆಹಲಿ : ಅಲಹಾಬಾದ್ ಹೈಕೋರ್ಟ್ ಈಚೆಗೆ ನೀಡಿದ್ದ ಒಂದು ಆದೇಶದಲ್ಲಿ 'ಸಂತ್ರಸ್ತ ಬಾಲಕಿಯ ಸ್ತನಗಳನ್ನು ಹಿಡಿದುಕೊಳ್ಳುವುದು, ಆಕೆಯ ಪೈಜಾಮಾದ ದಾರವನ್ನು ಹಿಡಿದು ಎಳೆಯುವುದಷ್ಟೇ' ಅತ್ಯಾಚಾರ ಆಗುವುದಿಲ್ಲ ಎಂದು ಹೇಳಿದ್ದುದನ್ನು ಪರಿಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ಬುಧವಾರ ಈ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಈ ವಿಚಾರವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
ಅಲಹಾಬಾದ್ ಹೈಕೋರ್ಟ್ ಆದೇಶವೊಂದರಲ್ಲಿ ಇದ್ದ ಈ ಮಾತುಗಳನ್ನು ಕಾನೂನು ತಜ್ಞರು ವಿರೋಧಿಸಿದ್ದರು. ಅಲಾಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಮ ಮನೋಹರ ನಾರಾಯಣ ಮಿಶ್ರಾ ಅವರು ನೀಡಿದ್ದ ಆದೇಶದಲ್ಲಿ ಈ ಮಾತು ಇತ್ತು.