ಭೋಪಾಲ್: ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಚಿತ್ರದಲ್ಲಿ ಮಧ್ಯಪ್ರದೇಶಯೊಂದರ 15ನೇ ಶತಮಾನದ ಕೋಟೆಯ ಬಳಿ ನಿಧಿ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ವದಂತಿಗಳ ನಡುವೆ ಜನರು ಕೋಟೆಯ ಸುತ್ತ ನಿಧಿ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥಾಹಂದರದ 'ಛಾವಾ' ಚಿತ್ರದಲ್ಲಿ ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಆತನ ಪತ್ಮಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ 15 ನೇ ಶತಮಾನದ ಆಸಿರ್‌ಗಢ ಕೋಟೆಯ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಹುಡುಕಾಟ ನಡೆಸಿದ್ದಾರೆ. ಕೋಟೆಯ ಸುತ್ತಲಿನ ಭೂಮಿಯನ್ನು ಅಗೆಯುತ್ತಿದ್ದಾರೆ ಎಂದು ಸ್ಥಳೀಯಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜನರು ಕೋಟೆಯ ಸುತ್ತಲು ಭೂಮಿ ಅಗೆಯುವ ಕಾರ್ಯದಲ್ಲಿ ತೊಡಗಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹರಿದಾಡುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಸೀರ್‌ಗಢ ಕೋಟೆಯ ಸುತ್ತಲೂ ನಿಧಿಗಾಗಿ ಜನರು ಭೂಮಿ ಅಗೆಯುತ್ತಿದ್ದಂತೆ ಬುರ್ಹಾನ್‌ಪುರ ಜಿಲ್ಲಾಡಳಿತವು ತನಿಖೆ ಆರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಹರ್ಷ ಸಿಂಗ್, ಚಿನ್ನದ ನಾಣ್ಯಗಳು ಇವೆ ಎಂಬ ವದಂತಿಗಳಿಂದಾಗಿ ಆಸಿರ್‌ಗಢ ಕೋಟೆ ಮತ್ತು ಬುರ್ಹಾನ್‌ಪುರ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳ ಹೊಲಗಳಲ್ಲಿಯೂ ಕೆಲವರು ಅಗೆಯುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಅಗೆಯುವ ಕಾರ್ಯವನ್ನು ತಕ್ಷಣವೇ ನಿಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
'ಭೂಮಿ ಅಗೆಯುವ ವೇಳೆ ಜನರಿಗೆ ನಾಣ್ಯಗಳು, ಸೇರಿದಂತೆ ಇನ್ನಿತರೆ ಪುರಾತನ ವಸ್ತುಗಳು ಸಿಕ್ಕಿದ್ದರೆ, ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗುವುದು' ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.