ಹೈದರಾಬಾದ್: 'ತಿರುಮಲದಲ್ಲಿರುವ ಏಳು ಬೆಟ್ಟಗಳು ವೆಂಕಟೇಶ್ವರನಿಗೆ ಸೇರಿದ್ದಾಗಿವೆ. ಹೀಗಾಗಿ, ಇಲ್ಲಿ ಅಪವಿತ್ರ ಚಟುವಟಿಕೆಗಳು, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
'ತಿರುಮಲ ದೇವಾಲಯದ ಕೆಲಸಗಳಿಗೆ ಹಿಂದೂಗಳನ್ನು ಮಾತ್ರ ನಿಯೋಜಿಸಲಾಗುವುದು. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಅಲ್ಲಿರುವ ಹಿಂದೂಯೇತರ ನೌಕರರನ್ನು ಬೇರೆಡೆಗೆ ವರ್ಗಾಯಿಸಲಾಗುವುದು' ಎಂದು ಹೇಳಿದ್ದಾರೆ.
'ಇಲ್ಲಿನ ಅಲಿಪಿರಿಯಲ್ಲಿ ಮುಮ್ತಾಜ್ ಹೋಟೆಲ್ ಪ್ರೈವೇಟ್ ಲಿಮಿಟೆಡ್, ಎಂಆರ್‌ಕೆಆರ್ ಹಾಗೂ ದೇವಲೋಕ್ ಪ್ರಾಜೆಕ್ಟ್‌ಗಳಿಗೆ ಮಂಜೂರಾಗಿದ್ದ ಭೂಮಿಯನ್ನು ರದ್ದುಗೊಳಿಸಿದ್ದೇನೆ' ಎಂದು ನಾಯ್ಡು ಶುಕ್ರವಾರ ಖಚಿತಪಡಿಸಿದರು.
ಅಲಿಪಿರಿ ಶ್ರೀವಾರಿ ಪಾದಾಲುವಿನಲ್ಲಿ ಹೋಟೆಲ್, ರೆಸಾರ್ಟ್ ನಿರ್ಮಾಣದ ಯೋಜನೆಗಳಿಗೆ ಹಿಂದಿನ ಜಗನ್ ನೇತೃತ್ವದ ಸರ್ಕಾರವು ಭೂಮಿ ಮಂಜೂರು ಮಾಡಿತ್ತು. ಈ ನಿರ್ಧಾರಕ್ಕೆ ಧಾರ್ಮಿಕ ಮುಖಂಡರು, ಸಂತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ, ನಾಯ್ಡು ಈ ಕ್ರಮ ಕೈಗೊಂಡಿದ್ದಾರೆ.
₹250 ಕೋಟಿ ವೆಚ್ಚದಲ್ಲಿ ಅಲಿಪಿರಿಯ 20 ಎಕರೆ ಪ್ರದೇಶದಲ್ಲಿ ರೆಸಾರ್ಟ್ ಹಾಗೂ 100 ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಲು ಮುಮ್ತಾಜ್ ಹೋಟೆಲ್ಸ್ ನಿರ್ಧರಿಸಿತ್ತು.
ಚಂದ್ರಬಾಬು ನಾಯ್ಡು-ಪಿಟಿಐ ಚಿತ್ರ