ಢಾಕಾ: ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿದ್ಯಾರ್ಥಿಗಳೇ ರೂಪಿಸಿರುವ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ಅಭಿಪ್ರಾಯಪಟ್ಟಿದೆ.
'ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದವರಲ್ಲಿ ಸಾಕಷ್ಟು ಎಡವಟ್ಟುಗಳಿಗೆ ಕಾರಣವಾಗಿರುವವರನ್ನು ಮೊದಲಿಗೆ ವಿಚಾರಣೆಗೆ ಒಳಪಡಿಸಬೇಕು.
ಆ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಕೂಡದು' ಎಂದು ಎನ್‌ಸಿಪಿ ಸಂಚಾಲಕ ನಹಿದ್ ಇಸ್ಲಾಂ ಅವರು ಅಮೆರಿಕ ಮೂಲದ 'ದಿ ಡಿಪ್ಲೊಮ್ಯಾಟ್' ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಬಾಂಗ್ಲಾದೇಶದಲ್ಲಿ ಎರಡನೇ ಗಣರಾಜ್ಯ ಸ್ಥಾಪಿಸಬೇಕು ಎನ್ನುವುದು ಎನ್‌ಸಿಪಿ ಉದ್ದೇಶ. ದೇಶದ ಅಧಿಕಾರ ವ್ಯವಸ್ಥೆಯನ್ನೇ ಮರುರೂಪಿಸುವಂತಹ ಹೊಸ ಸಂವಿಧಾನ ರಚಿಸುವ ಗುರಿಯೂ ಇದೆ' ಎಂದು ಅವರು ಹೇಳಿದ್ದಾರೆ.
'ದೆಹಲಿ ಕೇಂದ್ರಿತ ವ್ಯವಸ್ಥೆಯು ಬಾಂಗ್ಲಾದೇಶದಲ್ಲಿ ಇರಕೂಡದು. ಪಾಕಿಸ್ತಾನದ ಪ್ರಭಾವದ ಅಗತ್ಯವೂ ನಮಗಿಲ್ಲ. 1971ರ ಬಾಂಗ್ಲಾ ವಿಮೋಚನಾ ಸಂಗ್ರಾಮದ ಧ್ಯೇಯವನ್ನು ಸಾಕಾರಗೊಳಿಸಬೇಕು ಎನ್ನುವುದು ನಮ್ಮ ಉದ್ದೇಶ' ಎಂದು ನಹಿದ್ ತಿಳಿಸಿದ್ದಾರೆ.