ನವದೆಹಲಿ: ತೇಜಸ್ ಲಘು ಯುದ್ಧ ವಿಮಾನ ಯೋಜನೆಯ ಭಾಗವಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ(ಎಚ್‌ಎಎಲ್)ಗೆ 99 ಎಫ್-404 ಎಂಜಿನ್‌ಗಳನ್ನು ಪೂರೈಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಸಂಸ್ಥೆ ಜಿ.ಇ ಏರೋಸ್ಪೇಸ್ ಬುಧವಾರ ಹೇಳಿದೆ.
ಭಾರತೀಯ ವಾಯುಸೇನೆಗೆ 83 ತೇಜಸ್ ಎಂಕೆ-1ಎ ಯುದ್ಧವಿಮಾನಗಳನ್ನು ನಿರ್ಮಿಸಿಕೊಡುವ ₹48 ಸಾವಿರ ಕೋಟಿ ವೆಚ್ಚದ ಯೋಜನೆ ಬಗ್ಗೆ ರಕ್ಷಣಾ ಇಲಾಖೆಯು 2021 ಫೆಬ್ರುವರಿಯಲ್ಲಿ ಎಚ್‌ಎಎಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಎಚ್‌ಎಎಲ್‌ನಿಂದ ಯುದ್ಧ ವಿಮಾನ ಹಸ್ತಾಂತರ ಪ್ರಕ್ರಿಯೆಯು ಕಳೆದ ವರ್ಷ ಮಾರ್ಚ್‌ನಿಂದ ಆರಂಭವಾಗಬೇಕಿತ್ತು. ಆದರೆ, ಈವರೆಗೆ ಒಂದೂ ವಿಮಾನವನ್ನು ಹಸ್ತಾಂತರ ಮಾಡಿಲ್ಲ.
ಅಮೆರಿಕದ ಸಂಸ್ಥೆಯು ಎಂಜಿನ್ ಪೂರೈಕೆಯನ್ನು ವಿಳಂಬಗೊಳಿಸಿದ ಕಾರಣಕ್ಕೆ ವಿಮಾನ ನಿರ್ಮಾಣ ಪ್ರಕ್ರಿಯೆ ವಿಳಂಬವಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದೀಗ ಎಂಜಿನ್ ಪೂರೈಕೆಯು ಆರಂಭಗೊಂಡಿರುವುದರಿಂದ ಶೀಘ್ರದಲ್ಲಿ ಯುದ್ಧ ವಿಮಾನಗಳು ಸೇನೆಗೆ ಹಸ್ತಾಂತರವಾಗುವ ನಿರೀಕ್ಷೆಯಿದೆ.