ನವದೆಹಲಿ: ಬೂತ್ ಮಟ್ಟದ ಸಮಸ್ಯೆಗಳ ಪರಿಹಾರಕ್ಕಾಗಿ ಸುಮಾರು 4,000 ಚುನಾವಣಾ ನೋಂದಣಾಧಿಕಾರಿಗಳು ಸಂಬಂಧಿಸಿದ ವಿಧಾನಸಭೆ ಕ್ಷೇತ್ರದಲ್ಲಿ ಸರ್ವ ಪಕ್ಷಗಳ ಸಭೆ ನಡೆಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಪಕ್ಷಗಳೊಂದಿಗೆ ಬಹುಹಂತಗಳಲ್ಲಿ ಸಂವಾದ ನಡೆಸಬೇಕು ಎಂದು ಆಯೋಗ ಇತ್ತೀಚೆಗೆ ನಿರ್ದೇಶನ ನೀಡಿತ್ತು.
ಅದರ ಭಾಗವಾಗಿ ಈ ಸಭೆಗಳು ನಡೆಯುತ್ತಿವೆ.
788 ಜಿಲ್ಲಾ ಚುನಾವಣಾ ಅಧಿಕಾರಿಗಳು, 36 ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೂ ಇಂಥ ಸಭೆಗಳನ್ನು ಆಯೋಜಿಸಲು ಸೂಚಿಸಲಾಗಿದೆ.
ಈ ಸಭೆಗಳು ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿವೆ.
ಹಲವು ರಾಜ್ಯಗಳ ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್ ಸಂಖ್ಯೆ ಹೊಂದಿವೆ ಎಂದು ಇತ್ತೀಚೆಗೆ ಟಿಎಂಸಿ ಆರೋಪಿಸಿತ್ತು. ಈ ಬೆನ್ನಲ್ಲೇ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆಗೆ ಆಯೋಗ ನಿರ್ಧರಿಸಿದೆ.