ನವದೆಹಲಿ: ಕಾರ್ಯಾಂಗ ಮತ್ತು ಪ್ರಧಾನಿ ಮಾತ್ರವೇ ಮಹಾಲೇಖಪಾಲರನ್ನು (ಸಿಎಜಿ) ನೇಮಕ ಮಾಡುವ ಈಗಿನ ವ್ಯವಸ್ಥೆಯು ಸಂವಿಧಾನದ ಉಲ್ಲಂಘನೆ ಎಂದು ಘೋಷಿಸಬೇಕು ಎಂಬ ಕೋರಿಕೆ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಹೆಸರಿನ ಸರ್ಕಾರೇತರ ಸಂಘಟನೆಯೊಂದು ಈ ಪಿಐಎಲ್ ಸಲ್ಲಿಸಿದೆ. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಇದೇ ವಿಚಾರವಾಗಿ ವಿಚಾರಣೆಯ ಹಂತದಲ್ಲಿ ಇರುವ ಇನ್ನೊಂದು ಅರ್ಜಿಯೊಂದಿಗೆ ಜೋಡಿಸಿದೆ.
ಎನ್‌ಜಿಒ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ಇಲ್ಲಿ ಇರುವ ಪ್ರಶ್ನೆ ಮಹಾಲೇಖಪಾಲ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೆ ಎಂದರು. ಬಿಜೆಪಿಯು ಆಡಳಿತದಲ್ಲಿ ಇರುವ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಲೆಕ್ಕಪರಿಶೋಧನೆಯನ್ನು ತಡೆಯಲಾಗುತ್ತಿದೆ ಎಂದು ದೂರಿದರು.
ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇರುವ ಸ್ವತಂತ್ರ ಹಾಗೂ ತಟಸ್ಥ ಸಮಿತಿಯ ಜೊತೆ ಸಮಾಲೋಚನೆ ನಡೆಸಿ ರಾಷ್ಟ್ರಪತಿಯವರು ಮಹಾಲೇಖಪಾಲರನ್ನು ನೇಮಕ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.