ವಾಷಿಂಗ್ಟನ್/ನವದೆಹಲಿ (ಪಿಟಿಐ/ರಾಯಿಟರ್ಸ್): ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸುತ್ತಿದ್ದ ಸುಂಕವನ್ನು ಕಡಿತಗೊಳಿಸಲು ಭಾರತವು ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
'ಭಾರತವು ಈಗ ಸುಂಕ ಕಡಿಮೆ ಮಾಡಲು ಸಮ್ಮತಿಸಿದೆ. ಅವರು ಎಷ್ಟು ಸುಂಕ ವಿಧಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ ಬಳಿಕ ಭಾರತ ಈ ನಿರ್ಧಾರಕ್ಕೆ ಬಂದಿದೆ' ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಶುಕ್ರವಾರ ಹೇಳಿದ್ದಾರೆ.
'ಭಾರಿ ಸುಂಕದ ಕಾರಣ ನಮ್ಮ ಉತ್ಪನ್ನಗಳನ್ನು ಭಾರತದಲ್ಲಿ ಮಾರುವುದು ಕಷ್ಟವಾಗಿದೆ' ಎಂದು ಅವರು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಭಾರತ ವಿಧಿಸುತ್ತಿರುವ ಅತ್ಯಧಿಕ ಸುಂಕದ ಕುರಿತು ಟ್ರಂಪ್ ಈ ವಾರದಲ್ಲಿ ಮೂರನೇ ಬಾರಿ ಟೀಕಿಸಿದ್ದಾರೆ.
'ಆರ್ಥಿಕ ಮತ್ತು ವ್ಯಾಪಾರದ ದೃಷ್ಟಿಕೋನದಿಂದ ವಿಶ್ವದ ಬಹುತೇಕ ದೇಶಗಳು ನಮ್ಮ ದೇಶವನ್ನು ಸುಲಿಗೆ ಮಾಡಿವೆ. ಕೆನಡಾ, ಮೆಕ್ಸಿಕೊ, ಭಾರತ ಸೇರಿದಂತೆ ಕೆಲ ದೇಶಗಳು ನಮ್ಮ ಮೇಲೆ ಅತ್ಯಧಿಕ ಸುಂಕ ವಿಧಿಸಿವೆ. ಭಾರತದಲ್ಲಂತೂ ನಾವು ಏನನ್ನೂ ಮಾರಲು ಸಾಧ್ಯವಿಲ್ಲದಂತಾಗಿದೆ. ಈ ಮೂಲಕ ಅದು ನಮ್ಮ ಬಹುತೇಕ ಉತ್ಪನ್ನಗಳನ್ನು ನಿರ್ಬಂಧಿಸಿದಂತಿದೆ. ಹೀಗಾಗಿ ನಾವು ಭಾರತದ ಜತೆಗೆ ಅತಿ ಕಡಿಮೆ ವ್ಯವಹಾರ ನಡೆಸುತ್ತೇವೆ' ಎಂದು ಅವರು ಹೇಳಿದರು.
ಅಮೆರಿಕಕ್ಕೆ ಭೇಟಿ ನೀಡಿದ್ದ ಭಾರತದ ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಅವರು ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಅವರ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಏಪ್ರಿಲ್ 2ರಿಂದ ಭಾರತದ ಉತ್ಪನ್ನಗಳ ಮೇಲೆ ಪ್ರತಿ ಸುಂಕ ಹಾಕಲಾಗುವುದು ಎಂದು ಅವರು ಗುರುವಾರವೂ ಹೇಳಿದ್ದರು.
'ರಷ್ಯಾದ ರಕ್ಷಣಾ ಸಾಮಗ್ರಿ ಖರೀದಿ ನಿಲ್ಲಿಸಬೇಕು': 'ಭಾರತವು ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಇಳಿಸುವ ಜೊತೆಗೆ, ರಷ್ಯಾದ ರಕ್ಷಣಾ ಉಪಕರಣಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು' ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ಹೇಳಿದ್ದಾರೆ.
'ಇಂಡಿಯಾ ಟುಡೆ' ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.
'ಹಲವು ದಶಕಗಳಿಂದ,ಭಾರತವು ರಷ್ಯಾದಿಂದ ಭಾರಿ ಪ್ರಮಾಣದಲ್ಲಿ ರಕ್ಷಣಾ ಉಪಕರಣಗಳನ್ನು ಖರೀದಿಸುತ್ತಾ ಬಂದಿದೆ. ಈಗ, ಈ ಖರೀದಿಯನ್ನು ನಿಲ್ಲಿಸಿ, ಅಮೆರಿಕ ಉತ್ಪಾದಿಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿಸಬೇಕು' ಎಂದು ಹೋವರ್ಡ್ ಹೇಳಿದ್ದಾರೆ.
ಜೈರಾಮ್ ರಮೇಶ್
ದ್ವಿಪಕ್ಷೀಯ ಒಪ್ಪಂದಕ್ಕೆ ಒತ್ತು: ಭಾರತ
ನವದೆಹಲಿ: 'ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಸುಂಕ ಮತ್ತು ಸುಂಕರಹಿತ ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ಭಾರತವು ಅಮೆರಿಕದ ಜತೆಗೆ ಆಳವಾದ ವ್ಯಾಪಾರ ಸಂಬಂಧ ಹೊಂದಲು ಬಯಸುತ್ತದೆ' ಎಂದು ಭಾರತ ತಿಳಿಸಿದೆ. ಅಮೆರಿಕ್ಕೆ ಭೇಟಿ ನೀಡಿರುವ ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಅವರು ಎರಡೂ ದೇಶಗಳ ನಡುವಿನ ಬಹು ವಲಯಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಜೈರಾಮ್
ನವದೆಹಲಿ: 'ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಾವುದಕ್ಕೆ ಒಪ್ಪಿಗೆ ಸೂಚಿಸಿದೆ? ಭಾರತದ ರೈತರು ಮತ್ತು ಉತ್ಪಾದಕರ ಹಿತದ ಜತೆ ರಾಜೀ ಮಾಡಿಕೊಂಡಿದೆಯೇ? ಈ ಕುರಿತು ಪ್ರಧಾನಿ ಅವರು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ. ಭಾರತವು ಸುಂಕ ಕಡಿತಕ್ಕೆ ಸಮ್ಮತಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವ ವಿಡಿಯೊವನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಅವರು 'ವಾಣಿಜ್ಯ ಸಚಿವ ಪೀಯೂಷ್ ಗೋಯೆಲ್ ಅವರು ಅಮೆರಿಕದ ಜತೆ ವ್ಯಾಪಾರ ಕುರಿತು ಮಾತುಕತೆ ನಡೆಸಲು ವಾಷಿಂಗ್ಟನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಟ್ರಂಪ್ ಅವರು ಹೀಗಿ ಹೇಳಿದ್ದಾರಲ್ಲ...' ಎಂದು ಹೇಳಿದ್ದಾರೆ. ಸಂಸತ್ತಿನ ಅಧಿವೇಶನ ಇದೇ 10ರಿಂದ ಪುನರಾರಂಭವಾಗಲಿದೆ. ಹೀಗಾಗಿ ಪ್ರಧಾನಿ ಅವರು ಈ ವಿಷಯ ಕುರಿತು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.