ಗುವಾಹಟಿ: ಮಣಿಪುರದ ಕುಕಿ-ಝೋ ಸಂಘಟನೆಯ ಬುಡಕಟ್ಟು ಏಕತೆ ಸಮಿತಿ (COTU), ಸಮುದಾಯದ ಬೇಡಿಕೆಗಳನ್ನು ಗೌರವಿಸುವ ನಿರ್ಣಯವನ್ನು ತೆಗೆದುಕೊಳ್ಳುವವರೆಗೂ ಕುಕಿ-ಝೋ ಪ್ರದೇಶಗಳಲ್ಲಿ ಯಾವುದೇ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ.
ಸೋಮವಾರ ನಡೆದ ಕಾರ್ಯಕ್ರಮದಲ್ಲಿ 'ಎಂಟು ಅಂಶಗಳ ನಿರ್ಣಯ'ದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾರ್ಚ್ 8ರಿಂದ ಮಣಿಪುರದ ಎಲ್ಲಾ ರಸ್ತೆಗಳಲ್ಲಿ ಜನರಿಗೆ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮಾರ್ಚ್ 1ರಂದು ನವದೆಹಲಿಯಲ್ಲಿ ಮಣಿಪುರ ಭದ್ರತಾ ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾ, ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುವ ಯಾರಾದರೂ ಸಹ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರು.
ಸಭೆಯಲ್ಲಿ ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ನಿರ್ದೇಶಕ, ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ, ಪೂರ್ವ ಕಮಾಂಡ್‌ನ ಸೇನಾ ಕಮಾಂಡರ್, ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನ ಮಹಾನಿರ್ದೇಶಕರು, ಮಣಿಪುರದ ಭದ್ರತಾ ಸಲಹೆಗಾರ ಮತ್ತು ಗೃಹ ವ್ಯವಹಾರ ಸಚಿವಾಲಯ, ಸೇನೆ ಮತ್ತು ಮಣಿಪುರ ಆಡಳಿತದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
2023ರ ಮೇ 3ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರ ಜನಾಂಗೀಯವಾಗಿ ವಿಭಜನೆಯಾಗಿಯೇ ಉಳಿದಿದೆ. ಕುಕಿ-ಝೋ ಬುಡಕಟ್ಟು ಜನಾಂಗದವರು ಪ್ರತ್ಯೇಕ ಆಡಳಿತ ಸಾಧಿಸುವವರೆಗೆ, ಯಾವುದೇ ರಾಜಿ ಅಥವಾ ಶರಣಾಗತಿ ಆಗಲ್ಲ ಎಂದು ಹೇಳಿವೆ. ಪ್ರತಿಭಟನೆಗಳನ್ನು ಪ್ರಜಾಪ್ರಭುತ್ವದ ಅಡಿಯಲ್ಲೇ ಮುಂದುವರಿಯುತ್ತದೆ ಎಂದು COTU ಹೇಳಿದೆ.
ಜನರ ಶ್ರೇಯೋಭಿವೃದ್ಧಿಗಿಂತ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಅಥವಾ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ವ್ಯಕ್ತಿಯನ್ನು ದೇಶದ್ರೋಹಿ ಎಂದು COTU ಎಚ್ಚರಿಸಿದೆ. ಇದಲ್ಲದೆ, ಕುಕಿ-ಝೋ ಸ್ವಯಂಸೇವಕರ ಬಂಧನದ ವಿರುದ್ಧ ಅದು ಎಚ್ಚರಿಕೆ ನೀಡಿದೆ. ಕುಕಿ-ಝೋ ರಾಜಕೀಯ ಸಮಸ್ಯೆಯನ್ನು ಪರಿಹರಿಸದೆ ಸರ್ಕಾರ ಶಾಂತಿಯನ್ನು ಹೇರಿದರೆ, ಆಡಳಿತ ಸರ್ಕಾರವನ್ನು ಸಂಪೂರ್ಣವಾಗಿ ಬಹಿಷ್ಕರಿಸಲಾಗುವುದು ಎಂದು ಸಂಘಟನೆ ಹೇಳಿದೆ.