ಚೆನ್ನೈ: 'ತಮಿಳು ಸುಮಧುರವಾದ ಭಾಷೆ. ದೇಶದ ಮತ್ತು ವಿಶ್ವದ ಆಸ್ತಿಗಳಲ್ಲೊಂದು. ದೇಶದ ಪ್ರತಿಯೊಂದು ಭಾಷೆಯೂ ತನ್ನ ಗೌರವ ಸಿಗುವುದನ್ನು ಪ್ರಧಾನಿ ನರೇಂದ್ರ ಮೋದಿ ಖಾತ್ರಿಪಡಿಸಿದ್ದಾರೆ' ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಎನ್‌ಇಪಿ ಮೂಲಕ ಹಿಂದಿ ಹೇರುತ್ತಿದೆ ಎಂದು ತಮಿಳುನಾಡಿನಲ್ಲಿ ವಿವಾದ ಸೃಷ್ಟಿಯಾಗಿರುವ ನಡುವೆ ಸಚಿವ ವೈಷ್ಣವ್ ಈ ಮಾತು ಹೇಳಿದ್ದಾರೆ.
ಶ್ರೀಪೆರಂಬದೂರುವಿನಲ್ಲಿ ಜೆಟ್‌ವೆರ್ಕ್ ಎಲೆಕ್ಟ್ರಾನಿಕ್ಸ್ ಕಂಪನಿಯ ಉತ್ಪಾದನಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಿಕರನ್ನು ಉದ್ದೇಶಿಸಿ 'ವಣಕ್ಕಂ' ಎಂದು ತಮಿಳಿನಲ್ಲಿ ಹೇಳುವ ಮೂಲಕ ಮಾತು ಆರಂಭಿಸಿದರು.
'ನಾನು ಐಐಟಿ-ಕಾನ್ಪುರದಲ್ಲಿ ಅಧ್ಯಯನ ಮಾಡುತ್ತಿದ್ದೆ. ನಮ್ಮ ಅದೃಷ್ಟವೆಂಬಂತೆ ಸಡಗೋಪನ್ ಎಂಬುವವರು ನಮ್ಮ ಪ್ರಾಧ್ಯಾಪಕರಾಗಿದ್ದರು. ತಮಿಳು ಭಾಷೆ ಕುರಿತು ನನಗೆ ತಿಳಿಸಿಕೊಟ್ಟರು' ಎಂದು ಹೇಳಿದರು. 'ತಮಿಳು ಸುಮಧುರವಾದ ಭಾಷೆ. ವಣಕ್ಕಂ ಎಪ್ಪಡಿ ಇರುಕ್ಕುಂಗಾ (ಹೇಗಿದ್ದೀರಿ) ಹಾಗೂ ನಂಡ್ರಿ(ಧನ್ಯವಾದ) ಎಂಬ ಮೂರು ಪದಗಳು ನನಗೆ ಗೊತ್ತು' ಎಂದರು.
'ರೊಂಬ ರೊಂಬ ನಂಡ್ರಿ(ಬಹಳ ಬಹಳ ಧನ್ಯವಾದಗಳು)' ಎಂದು ಹೇಳುವ ಮೂಲಕ ಅವರು ಭಾಷಣ ಮುಗಿಸಿದರು.