ಮಂಜೇಶ್ವರ: ದೇಶೀಯ ಅಧ್ಯಾಪಕ ಪರಿಷತ್ ಮಹಿಳಾ ಘಟಕದ ವತಿಯಿಂದ ವನಿತಾ ಸಂಗಮ-ಆಶಾ ನಮನ ಕಾರ್ಯಕ್ರಮ ಮಾ.8 ರಂದು ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೀಂಜ ಗ್ರಾ.ಪಂ. ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯೀ ಸಮಿತಿಯ ಅಧ್ಯಕ್ಷೆ ಪ್ರಮೀಳಾ ಮಜಲ್ ಅವರು ಮಾತನಾಡುತ್ತಾ ಆಶಾ ಕಾರ್ಯಕರ್ತೆಯರು ಮಾಡುವ ಸಮಾಜಸೇವೆ ಶ್ರೇಷ್ಠವಾದದ್ದು.ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ವಿಶ್ವಮಹಿಳಾದಿನದಂದು ಹಮ್ಮಿಕ್ಕೊಂಡ ದೇಶೀಯ ಅಧ್ಯಾಪಕ ಪರಿಷತ್ ಮಹಿಳಾ ಘಟಕವು ಶ್ಲಾಘನೀಯ ಕಾರ್ಯವನ್ನೇ ಮಾಡಿದೆ ಎಂದರು.
ಮುಖ್ಯ ಅಭ್ಯಾಗತರಾಗಿದ್ದ ದೇಶೀಯ ಅಧ್ಯಾಪಕ ಪರಿಷತ್ ರಾಜ್ಯ ಘಟಕದ ಸದಸ್ಯ ಅರವಿಂದಾಕ್ಷ ಹಾಗೂ ನಿವೃತ್ತ ಅಧ್ಯಾಪಕ, ದೇಶೀಯ ಅಧ್ಯಾಪಕ ಪರಿಷತ್ ನ ರಾಜ್ಯ ಘಟಕದ ಮಾಜಿ ಸದಸ್ಯ ವಿಘ್ನೇಶ್ವರ ಕೆದುಕೋಡಿ ಶುಭಾಶಂಸನೆಗೈದರು. ಈ ಸಂದರ್ಭ ಜಿಲ್ಲೆಯ ಐವತ್ತಾರು ಮಂದಿ ಆಶಾ ಕಾರ್ಯಕರ್ತೆಯರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಅಭಿನಂದಿತರು. ಆಶಾ ಕಾರ್ಯಕರ್ತೆಯರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡದ್ದಲ್ಲದೆ ತಮಗೆ ಮೊತ್ತ ಮೊದಲು ಸಿಕ್ಕಿದ ಅಂಗೀಕಾರ ಇದಾಗಿದೆ ಎಂದು ಅಭಿಪ್ರಾಯ ಪಟ್ಟರು.
ದೇಶೀಯ ಅಧ್ಯಾಪಕ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಕದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಬೇಕಾದುದು ಅತಿ ಅಗತ್ಯ ಎಂದರು. ದೇಶೀಯ ಅಧ್ಯಾಪಕ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ ಟೀಚರ್ ಸ್ವಾಗತಿಸಿ, ಕುಂಬಳೆ ಉಪಜಿಲ್ಲೆಯ ಕಾರ್ಯದರ್ಶಿ ದಿವ್ಯಾ ಎಸ್. ವಂದಿಸಿದರು. ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷೆ ಚಂದ್ರಿಕಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ನವಜೀವನ ಶಾಲೆಯ ಅಧ್ಯಾಪಿಕೆ ಜ್ಯೋತ್ಸ್ನಾ ಕಡಂದೇಲು ಪ್ರಾರ್ಥನೆ ಹಾಡಿದರು.