HEALTH TIPS

'ನರೇಗಾ' ತಾರತಮ್ಯ: ಸಂಸತ್ತಿನ ಹೊರಗಡೆ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ: 'ನರೇಗಾ' ಯೋಜನೆಯಡಿ ಕೂಲಿ ಮೊತ್ತ ಹೆಚ್ಚಿಸಬೇಕು ಮತ್ತು ತಾರತಮ್ಯವಿಲ್ಲದೆ ರಾಜ್ಯಗಳಿಗೆ ಬಾಕಿ ಉಳಿದಿರುವ ಮೊತ್ತ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸಂಸದರು ಮಂಗಳವಾರ ಸಂಸತ್ತಿನ ಹೊರಗಡೆ ಪ್ರತಿಭಟಿಸಿದರು.

ಲೋಕಸಭೆ ವಿರೋಧ ಪ‍ಕ್ಷದ ನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್, ಶಶಿ ತರೂರ್ ಹಾಗೂ ಪಕ್ಷದ ಕೇರಳ ಘಟಕದ ಹಲವು ಮುಖಂಡರಿದ್ದರು.

'ಹಣದುಬ್ಬರ ಹೆಚ್ಚಳದ ಹಿನ್ನೆಲೆಯಲ್ಲಿ ಕೂಲಿ ಮೊತ್ತವನ್ನು ಏರಿಸಬೇಕು ಎಂಬ ಒತ್ತಾಯವಿದೆ. ಆದರೆ, ಕೇಂದ್ರ ಸರ್ಕಾರ ಕ್ರಮ ಜರುಗಿಸದೇ ಲಕ್ಷಾಂತರ ಬಡ ಕುಟುಂಬದವರು ನರಳುವಂತೆ ಮಾಡಿದೆ' ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದರು.

ರಾಜ್ಯಗಳಿಗೆ ಬಾಕಿ ಇರುವ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ನರೇಗಾ ಯೋಜನೆಯಡಿ ಕೆಲಸದ ಅವಧಿಯನ್ನು 150 ದಿನಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಲೋಕಸಭೆಯಲ್ಲೂ ಪ್ರಸ್ತಾಪ: ನರೇಗಾ ಯೋಜನೆ ಮೊತ್ತ ಬಾಕಿ ಉಳಿದಿದೆ ಎಂಬ ವಿಷಯ ಲೋಕಸಭೆ ಪ್ರಶ್ನೋತ್ತರ ಅವಧಿಯಲ್ಲೂ ವಾಗ್ವಾದಕ್ಕೆ ಕಾರಣವಾಯಿತು. ಆದರೆ, ತಾರತಮ್ಯ ಎಸಗಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿತು.

ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ ಡಿಎಂಕೆ, ತೃಣಮೂಲ ಕಾಂಗ್ರೆಸ್‌ ಸದಸ್ಯರು ಪ್ರತಿಭಟಿಸಿದರು. ಇದರಿಂದ ಕೆಲ ಹೊತ್ತು ಕಲಾಪವನ್ನು ಮುಂದೂಡಲಾಯಿತು.

ಕೇರಳದ ಸಂಸದ ಅಡೂರ್ ಪ್ರಕಾಶ್ ಅವರು, 'ನರೇಗಾ ಯೋಜನೆಯ ಕೂಲಿ ಮೊತ್ತ ಬಿಡುಗಡೆ ವಿಳಂಬವಾಗಿದೆ. ಕೂಲಿ ಮೊತ್ತವೂ ಕಡಿಮೆ ಇದೆ' ಎಂದು ಗಮನಸೆಳೆದರು.

ಗ್ರಾಮೀಣಾಭಿವೃದ್ಧಿ ಖಾತೆ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಅವರು‌, 'ಕೇರಳ ರಾಜ್ಯಕ್ಕೆ ಈ ವರ್ಷ ಈಗಾಗಲೇ ₹3,000 ಕೋಟಿ ಬಿಡುಗಡೆ ಆಗಿದೆ. ಕಳೆದ ವರ್ಷ ₹3,500 ಕೋಟಿ ಬಿಡುಗಡೆ ಆಗಿತ್ತು. ಹಣ ಬಿಡುಗಡೆ ನಿರಂತರ ಪ್ರಕ್ರಿಯೆ. ಬಾಕಿ ಇರುವುದನ್ನು ಕೆಲವು ವಾರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ' ಎಂದು ಹೇಳಿದರು.

ರಾಜ್ಯಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪಕ್ಕೆ ದನಿಗೂಡಿಸಿದ ಡಿಎಂಕೆ ಸಂಸದೆ ಕನಿಮೊಳಿ, 'ನರೇಗಾ ಯೋಜನೆಯಡಿ ತಮಿಳುನಾಡಿಗೆ ₹4,034 ಕೋಟಿ ಬರಬೇಕಿತ್ತು. ಕಳೆದ ಐದು ತಿಂಗಳಿನಿಂದ ರಾಜ್ಯವು ಮೊತ್ತ ಬಿಡುಗಡೆಯ ನಿರೀಕ್ಷೆಯಲ್ಲಿದೆ' ಎಂದು ತಿಳಿಸಿದರು.

ಇದೇ ವೇಳೆ ಸರ್ಕಾರವನ್ನು ಸಮರ್ಥಿಸಿಕೊಂಡ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಅವರು, 'ಕೇಂದ್ರ ಸರ್ಕಾರ ಎಂದಿಗೂ ರಾಜ್ಯಗಳ ನಡುವೆ ತಾರತಮ್ಯವನ್ನು ಎಸಗಿಲ್ಲ' ಎಂದು ಪ್ರತಿಪಾದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries