ಭುವನೇಶ್ವರ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಂದೆ, ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಪ್ರಧಾನ್ (84) ಅವರು ನವದೆಹಲಿಯಲ್ಲಿ ಸೋಮವಾರ ನಿಧನರಾದರು.
ಧರ್ಮೇಂದ್ರ ಪ್ರಧಾನ್ ಅವರ ಅಧಿಕೃತ ನಿವಾಸದಲ್ಲಿ ಅವರು ನಿಧನರಾಗಿದ್ದು, ಅವರಿಗೆ ಇಬ್ಬರು ಪುತ್ರರು ಇದ್ದಾರೆ.
1988ರಿಂದ 1997ರವರೆಗೆ ಒಡಿಶಾ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ದೇವೇಂದ್ರ ಅವರು ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು.
ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು 1988ರಲ್ಲಿ ಬಿಜೆಪಿ ಸೇರಿದರು. 1998ರ ಲೋಕಸಭೆ ಚುನಾವಣೆಯಲ್ಲಿ ದೇವಗಢ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 1999ರಲ್ಲಿ ಪುನರಾಯ್ಕೆಯಾಗಿ, 1999ರಿಂದ 2001ರವರೆಗೆ ಸಾರಿಗೆ ಮತ್ತು ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.