ರೋಮ್: ಯುದ್ಧ ಪೀಡಿತ ಉಕ್ರೇನ್‌ಗೆ ಐರೋಪ್ಯ ಒಕ್ಕೂಟದ ಸೇನೆಯನ್ನು ಕಳುಹಿಸುವ ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ಪ್ರಸ್ತಾಪಕ್ಕೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಿನ್ನರಾಗ ತೆಗೆದಿದ್ದಾರೆ.
ಅಮೆರಿಕದ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಉಕ್ರೇನ್‌ಗೆ ಐರೋಪ್ಯ ಒಕ್ಕೂಟ ಬೆಂಬಲ ಘೋಷಿಸಿತ್ತು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ಭೇಟಿಯಾಗಿದ್ದ ಬ್ರಿಟನ್ ಅಧ್ಯಕ್ಷ ಕೀರ್ ಸ್ಟಾರ್ಮರ್, ಯುದ್ಧ ನಿಲ್ಲುವವರೆಗೂ ಸಹಕಾರದ ನೀಡುವುದಾಗಿ ತಿಳಿಸಿದ್ದರು.
ಸೇನಾ ನೆರವು ಸ್ಥಗಿತಗೊಳಿಸುವ ಅಮೆರಿಕದ ನಿರ್ಧಾರಕ್ಕೆ ಪ್ರತಿಯಾಗಿ ಉಕ್ರೇನ್‌ಗೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಸೇನಾ ಪಡೆಗಳನ್ನು ಕಳುಹಿಸುವ ಬಗ್ಗೆ ಫ್ರಾನ್ಸ್ ಮತ್ತು ಯುಕೆ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದವು.
ಈ ಬಗ್ಗೆ Rai1 ವಾಹಿನಿಯೊಂದಿಗೆ ಮಾತನಾಡಿದ ಮೆಲೋನಿ, 'ಇಟಲಿಯ ಸೈನಿಕರನ್ನು ಉಕ್ರೇನ್‌ಗೆ ಕಳುಹಿಸುವುದಿಲ್ಲ' ಎಂದು ಹೇಳಿದ್ದಾರೆ.
'ಐರೋಪ್ಯ ಸೇನಾ ಪಡೆಗಳನ್ನು ಉಕ್ರೇನ್‌ಗೆ ಕಳುಹಿಸುವ ಫ್ರಾನ್ಸ್ ಮತ್ತು ಯುಕೆ ಪ್ರಸ್ತಾಪದ ಬಗ್ಗೆ ನಮಗೆ ಅನುಮಾನವಿದೆ. ಅದನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಟ ಎಂದು ನಾನು ಭಾವಿಸುತ್ತೇನೆ. ಅದರ ಪರಿಣಾಮದ ಬಗ್ಗೆ ನನಗೆ ಯಾವುದೇ ಖಚಿತತೆಯಿಲ್ಲ' ಎಂದು ಹೇಳಿದ್ದಾರೆ.
'ಉಕ್ರೇನ್‌ನಲ್ಲಿ ಶಾಂತಿ ನೆಲೆಗೊಳಿಸುವುದೇ ಪ್ರತಿಯೊಬ್ಬರ ಗುರಿಯಾಗಿದೆ. ನಾನು ಕೂಡ ಅದನ್ನೇ ಬಯಸುತ್ತೇನೆ. ಇದೇ ಪ್ರಮುಖ ವಿಷಯವಾಗಿದೆ' ಎಂದು ಹೇಳಿದರು.