ಕಾಸರಗೋಡು: ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಬೋನಿನೊಳಗೆ ಸೆರೆಯಾದ ಚಿರತೆಯನ್ನು ತೃಶ್ಯೂರಿನ ಮೃಗಾಲಯವಾದ ಪುತ್ತೂರು ಝುವೊಲೋಜಿಕಲ್ ಪಾರ್ಕ್‍ಗೆ ರವಾನಿಸಲಾಗಿದೆ. ಸೆರೆಯಾದ ಚಿರತೆ ಶರೀರದಲ್ಲಿ ಸಣ್ಣಪುಟ್ಟ ಗಾಯಗಳುಂಟಾಗಿರುವ ಹಿನ್ನೆಲೆಯಲ್ಲಿ ಇದಕ್ಕೆ ಮಾದಕ ಚುಚ್ಚುಮದ್ದು ನೀಡಿದ ನಂತರ ವೈದ್ಯರಿಂದ ಚಿಕಿತ್ಸೆ ನೀಡಿದ ನಂತರ ಮೃಗಾಲಯಕ್ಕೆ ಕೊಂಡೊಯ್ಯಲಾಗಿದೆ. ಐದು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ.
ಕೊಳತ್ತೂರಿನ ಬರೋಟಿ ಸನಿಹ ನಿಡುವೋಟ್ ಎಂಬಲ್ಲಿ ಜನಾರ್ದನನ್ ಎಂಬವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಕೆ ಅಧಿಕಾರಿಗಳು ಅಳವಡಿಸಿದ್ದ ಬೋನಿನೊಳಗೆ ಬುಧವಾರ ಚಿರತೆ ಸೆರೆಯಾಗಿದ್ದು, ನಂತರ ಬೋನನ್ನು ಪಳ್ಳತ್ತುಂಗಾಲ್ ಅರಣ್ಯ ಇಲಾಖೆ ಕಚೇರಿಯಲ್ಲಿರಿಸಿದ್ದರು. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ದೇಶದಲ್ಲಿ ಮೊತ್ತಮೊದಲ ಬಾರಿಗೆ ತೃಶ್ಯೂರಿನಲ್ಲಿ ನಿರ್ಮಿಸಲಾದ ಡಿಸೈನ್ ಮೃಗಾಲಯಕ್ಕೆ ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು.
ಇದೇ ಪ್ರದೇಶದಲ್ಲಿ ಫೆ. 23ರಂದು ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನೊಳಗೆ 5 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಸೆರೆಯಾಗಿದ್ದು, ನಂತರ ಇದನ್ನು ಬೆಳ್ಳೂರು-ಎಣ್ಮಕಜೆ ಪಂಚಾಯಿತಿ ಗಡಿಪ್ರದೇಶದ ನೆಟ್ಟಣಿಗೆ-ಬೆಳ್ಳೂರು ಪ್ರದೇಶದಲ್ಲಿ ಬಿಟ್ಟಿದ್ದು, ಇದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಇದೇ ರೀತಿ ಯಾವುದಾದರೂ ಕಾಡಿಗೆ ಚಿರತೆಯನ್ನು ಬಿಡುವ ಸಾಧ್ಯತೆ ಬಗ್ಗೆ ಜನತೆ ಆತಂಕಿತರಾಗಿದ್ದ ಮಧ್ಯೆ ಸೆರೆಯಾದ ಚಿರತೆಯನ್ನು ತೃಶ್ಯೂರಿನ ಮೃಗಾಲಯಕ್ಕೆ ರವಾನಿಸುವ ಬಗ್ಗೆ ನಿರ್ಣಯ ಕೈಗೊಂಡಿತ್ತು.