ನವದೆಹಲಿ (PTI): ಬಾರಾಮುಲ್ಲಾ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದಲ್ಲಿ ಜೈಲಿನಲ್ಲಿರುವ ಅಬ್ದುಲ್ ರಶೀದ್ ಶೇಖ್ ಅವರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎಎನ್‌ಐ) ಆತಂಕ ವ್ಯಕ್ತಪಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಹೈಕೋರ್ಟ್, 'ನ್ಯಾಯಾಲಯದ ಶಕ್ತಿಯನ್ನು ಕಡೆಗಣಿಸದಿರಿ' ಎಂದಿದೆ.
ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ರಶೀದ್ ಅವರು ಕಸ್ಟಡಿ ಪರೋಲ್ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು. ಈ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿರುವ ಎಎನ್‌ಐ, 'ಒಮ್ಮ ಅವರು ಸಂಸತ್ತು ಪ್ರವೇಶಿಸಿದರೆ, ಅವರು ನಮ್ಮ ನಿಯಂತ್ರಣದಲ್ಲಿರುವುದಿಲ್ಲ' ಎಂಬುದಾಗಿ ಆತಂಕ ವ್ಯಕ್ತಪಡಿಸಿತ್ತು.
'ಅವರು ಸಂಸತ್ತಿನ ಒಳಗೆ ಹೋದರೆ, ಹೀಗೆ ಆಗಿಬಿಡುತ್ತದೆ, ಹಾಗೆ ಆಗಿ ಬಿಡುತ್ತದೆ ಎಂಬೆಲ್ಲಾ ಯೋಚನೆಗಳು ಬೇಡ. ನ್ಯಾಯಾಲಯದ ಕೈಗಳು ಬಹಳ ದೂರದವರೆಗೆ ಚಾಚಿರುತ್ತವೆ. ಜೊತೆಗೆ, ಲೋಕಸಭಾ ಸ್ಪೀಕರ್ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದೂ ಗ್ರಹಿಸುವುದು ಬೇಡ. ನಾವೇನೂ ಅವರಿಗೆ ಜಾಮೀನು ನೀಡುತ್ತಿಲ್ಲ' ಎಂದು ನ್ಯಾಯಮೂರ್ತಿಗಳಾದ ಚಂದ್ರ ಧಾರಿ ಸಿಂಗ್ ಹಾಗೂ ಅನೂಪ್ ಜೈರಾಮ್ ಭಂಭಾನಿ ಅವರಿದ್ದ ಪೀಠವು ಮಂಗಳವಾರ ಅಭಿಪ್ರಾಯಪಟ್ಟಿತು.
ರಶೀದ್ ಅವರ ಅರ್ಜಿಯ ಸಂಬಂಧ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತು.