ಛತ್ರಪತಿ ಸಂಭಾಜಿನಗರ: ದೇಶದ ನವೋದ್ಯಮವೊಂದು ತಯಾರಿಸಿದ ಕೀಟನಾಶಕ ಸಿಂಪಡಣೆ ಯಂತ್ರವನ್ನು ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪರೀಕ್ಷಿಸಿದ್ದಾರೆ. ಇದರಿಂದ ಈ ಕೃಷಿ ಉಪಕರಣಕ್ಕೆ ಭಾರಿ ಬೇಡಿಕೆ ಸೃಷ್ಟಿಸಲಾಗಿದೆ.
ಯೋಗೇಶ್ ಗವಾಂಡೆ ಎನ್ನುವ ಸ್ಥಳೀಯ ಎಂಜಿನಿಯರ್ ಈ ಕೀಟನಾಶಕ ಸಿಂಪಡಣೆ ಯಂತ್ರವನ್ನು ವಿನ್ಯಾಸಗೊಳಿಸಿದ್ದಾರೆ.
2019ರಲ್ಲಿ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಕೃಷಿ ಉಪಕರಣಗಳನ್ನು ತಯಾರಿಸುವ ಕಂಪನಿ ಸ್ಥಾಪಿಸಿದ್ದಾರೆ. ಇದುವರೆಗೆ 5 ಸಾವಿರಕ್ಕೂ ಹೆಚ್ಚು ಯಂತ್ರಗಳನ್ನು ಮಾರಾಟ ಮಾಡಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದ ಗವಾಂಡೆ, ತಾವು ತಯಾರಿಸುವ ಕೃಷಿ ಉಪಕರಣಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಈ ಯಂತ್ರವು ಚಕ್ರಗಳನ್ನು ಹೊಂದಿದ್ದು, ರೈತರು ಹೊತ್ತುಕೊಂಡು ತಿರುಗುವ ಅವಶ್ಯಕತೆ ಇಲ್ಲ. 4 ಸಾಲಿನ ಬೆಳೆಗಳಿಗೆ ಒಂದೇ ಬಾರಿಗೆ ಕೀಟನಾಶಕ ಸಿಂಪಡಣೆ ಮಾಡಬಹುದಾಗಿದೆ.
ಮರಗಳಿಗೆ ಸಿಂಪಡಣೆ ಮಾಡಲು ಇದರಲ್ಲಿ 12ರಿಂದ 14 ಅಡಿ ಸಿಂಪಡಣೆಯ ನಾಜಿಲ್‌ಗಳಿದ್ದು, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಹುದಾಗಿದೆ. ನಾಜಿಲ್‌ಗಳ ಒತ್ತಡ ಕಡಿಮೆ ಮಾಡಬಹುದಾಗಿದೆ. ಇದರಿಂದ ಬೆಳೆಗೆ ಹಾನಿ ಆಗುವುದಿಲ್ಲ. ಈ ಉತ್ಪನ್ನ ರೈತ ಸ್ನೇಹಿಯಾಗಿರಲಿದೆ ಎಂದು ಗವಾಂಡೆ ಹೇಳಿದ್ದಾರೆ.
ದೇಶದ 22 ರಾಜ್ಯಗಳಲ್ಲಿ ಈ ಉಪಕರಣಗಳನ್ನು ಮಾರಾಟ ಮಾಡಲಾಗಿದೆ. ಕೆನ್ಯಾ ಮತ್ತು ನಮೀಬಿಯಾ ದೇಶದಿಂದ ಆರ್ಡರ್ ಬರುತ್ತಿವೆ. ಬಿಲ್ ಗೇಟ್ಸ್ ಭಾರತಕ್ಕೆ ಬಂದಾಗ ಅವರನ್ನು ಭೇಟಿಯಾದೆ. ಈ ವೇಳೆ ಉಪಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಎಂದು ಹೇಳಿದ್ದಾರೆ.
ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಅವರಿಗೆ ಕೀಟನಾಶಕ ಸಿಂಪಡಣೆ ಯಂತ್ರದ ಬಗ್ಗೆ ಎಂಜಿನಿಯರ್ ಯೋಗೇಶ್ ಗವಾಂಡೆ ಮಾಹಿತಿ ನೀಡಿದರು