ನವದೆಹಲಿ (PTI): 'ಮಾರ್ಚ್ 8ರಿಂದ ಮಣಿಪುರದಾದ್ಯಂತ ಎಲ್ಲ ರಸ್ತೆಗಳಲ್ಲಿಯೂ ಜನರು ಮುಕ್ತವಾಗಿ ಓಡಾಟಕ್ಕೆ ಅನುವು ಮಾಡಿಕೊಡಬೇಕು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ.
ಮಣಿಪುರದ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕುರಿತಂತೆ ಶನಿವಾರ ನವದೆಹಲಿಯಲ್ಲಿ ಭದ್ರತಾ ಪಡೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ರಸ್ತೆಗಳಲ್ಲಿ ಜನ-ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಮಣಿಪುರದಲ್ಲಿ ಕಳೆದ ಫೆ.13ರಂದು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ಬಳಿಕ ಮೊದಲ ಬಾರಿಗೆ ಅಮಿತ್ ಶಾ ಈ ಸಭೆ ನಡೆಸಿದ್ದಾರೆ. 2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ಸಂಭವಿಸಿದ ಜನಾಂಗೀಯ ಹಿಂಸಾಚಾರದಿಂದ 250 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.
'ಸುಲಿಗೆ ಮಾಡುವ ಎಲ್ಲ ಪ್ರಕರಣಗಳಲ್ಲಿ ಕಠಿಣ ಕ್ರಮ ಮುಂದುವರಿಸಲಾಗುವುದು. ಮಣಿಪುರಕ್ಕೆ ಹೊಂದಿಕೊಂಡಿರುವ ಅಂತರರಾಷ್ಟ್ರೀಯ ಗಡಿಗಳಲ್ಲಿ ಬೇಲಿ ಹಾಕುವ ಕೆಲಸ ತ್ವರಿತಗೊಳಿಸಲಾಗುವುದು. ರಾಜ್ಯದಲ್ಲಿ ಹಬ್ಬಿರುವ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕುವಂತೆ ಸೂಚನೆ ನೀಡಲಾಗಿದೆ' ಎಂದು ಗೃಹ ಸಚಿವಾಲಯ ಬಿಡುಗಡೆಗೊಳಿಸಿದ ಪ‍್ರಕಟಣೆಯಲ್ಲಿ ತಿಳಿಸಲಾಗಿದೆ.
ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಇಲಾಖೆ ನಿರ್ದೇಶಕ ತಪನ್ ದೇಖ, ಸೇನೆಯ ಉಪಮುಖ್ಯಸ್ಥ, ಸೇನಾ ಪೂರ್ವ ವಲಯ ಕಮಾಂಡರ್, ಬಿಎಸ್‌ಎಫ್, ಸಿಆರ್‌ಪಿಎಫ್, ಅಸ್ಸಾಂ ರೈಫಲ್ಸ್‌ನ ನಿರ್ದೇಶಕರು, ಭದ್ರತಾ ಸಲಹೆಗಾರರು ಸಭೆಯಲ್ಲಿದ್ದರು.
ಅವಧಿ ವಿಸ್ತರಣೆ: ರಾಜ್ಯದ ವಿವಿಧೆಡೆಯಲ್ಲಿ ಅಕ್ರಮವಾಗಿ ಲೂಟಿ ಮಾಡಿದ್ದ ಶಸ್ತ್ರಾಸ್ತ್ರಗಳನ್ನು ಮರಳಿ ಸರ್ಕಾರಕ್ಕೆ ಒಪ್ಪಿಸುವಂತೆ ರಾಜ್ಯಪಾಲರು ಫೆ. 20ರವರೆಗೆ ಜನರಿಗೆ ಅವಕಾಶ ನೀಡಿದ್ದರು. ಈ ವೇಳೆ 300 ಶಸ್ತ್ರಾಸ್ತ್ರಗಳನ್ನು ಮರಳಿಸಲಾಗಿತ್ತು. ಶುಕ್ರವಾರ ಈ ಅವಧಿಯನ್ನು ಮಾ.6ರ ಸಂಜೆ 4ರವರೆಗೆ ವಿಸ್ತರಿಸಿದ್ದಾರೆ.