ಕೋಯಿಕ್ಕೋಡ್: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಬಾಲಕ ರಸ್ತೆಯಲ್ಲಿ ಇನ್ನೋವಾ ಕಾರನ್ನು ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಾಲಕನ ತಂದೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೋಯಿಕ್ಕೋಡ್ ಜಿಲ್ಲೆಯ ಚೆಕ್ಕಿಯಾಡ್‌ನಲ್ಲಿರುವ ತಮ್ಮ ಮನೆಯ ಬಳಿಯ ರಸ್ತೆಯಲ್ಲಿ 13 ವರ್ಷದ ಬಾಲಕ ಇನ್ನೋವಾ ಕಾರು ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಮಾಡಲಾಗಿತ್ತು. ಅದನ್ನು ಇತ್ತೀಚೆಗೆ ನಮ್ಮ 'ಸುಭಯಾತ್ರ' ಪೋರ್ಟಲ್‌ನಲ್ಲಿ ವ್ಯಕ್ತಿಯೊಬ್ಬರು ವಿಡಿಯೊ ದೃಶ್ಯಗಳನ್ನು ಹಂಚಿಕೊಂಡಿದ್ದರು. ಈ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಂಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸುಭಯಾತ್ರ' ಎಂಬುದು ಸಂಚಾರ ಅಪರಾಧಗಳನ್ನು ವರದಿ ಮಾಡಲು ಕೇರಳ ಪೊಲೀಸರ ಒಂದು ಉಪಕ್ರಮವಾಗಿದೆ.
ಬಾಲಕನ ತಂದೆಯನ್ನು 37 ವರ್ಷದ ನೌಶಾದ್ ಎಂದು ಗುರುತಿಸಲಾಗಿದ್ದು, ಅವರ ಅಪ್ರಾಪ್ತ ಮಗನಿಗೆ ವಾಹನ ಚಲಾಯಿಸಲು ವಾಹನವನ್ನು ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.