ಢಾಕಾ: ಬಾಂಗ್ಲಾದೇಶದ ರಾಜಧಾನಿಯಲ್ಲಿರುವ ಪ್ರಮುಖ ಬೈತುಲ್ ಮೊಕರ‍್ರಂ ಮಸೀದಿಯ ಬಳಿ ಪ್ರತಿಭಟನ ಮೆರವಣಿಗೆ ನಡೆಸುತ್ತಿದ್ದ ನಿಷೇಧಿತ ಹಿಜ್ಬ್ ಉತ್ ತಹ್ರೀರ್ ಗುಂಪಿನ ಸಾವಿರಾರು ಸದಸ್ಯರನ್ನು ಚದುರಿಸಲು ಪೊಲೀಸರು ಶುಕ್ರವಾರ ಲಾಠಿ, ಅಶ್ರುವಾಯು ಮತ್ತು ಸ್ಟನ್ ಗ್ರನೇಡ್‌ಗಳನ್ನು ಬಳಸಿದರು.
ವಾರದ ಪ್ರಾರ್ಥನೆಯ ನಂತರ ನಡೆದ ಹಿಂಸಾಚಾರದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಹಲವು ಮಂದಿ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಕಾರರು ಪೊಲೀಸ್ ಬ್ಯಾರಿಕೇಡ್ ಭೇದಿಸಿ, ಹಿಂಸಾಚಾರ ನಡೆಸಲು ಯತ್ನಿಸಿದರು. ಆಗ ಗುಂಪನ್ನು ಚದುರಿಸಲಾಯಿತು ಎಂದು ಢಾಕಾ ಮೆಟ್ರೋಪಾಲಿಟನ್ ಡಿಸಿಪಿ ಮಸೂದ್ ಆಲಂ ತಿಳಿಸಿದ್ದಾರೆ.
ನಿಷೇಧಿತ ಈ ಗುಂಪು 'ಸ್ವಾತಂತ್ರ್ಯಕ್ಕಾಗಿ ಮೆರವಣಿಗೆ'ಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡಿ, ಕರಪತ್ರ ಮತ್ತು ಪೋಸ್ಟರ್‌ಗಳನ್ನು ಹಂಚಿತ್ತು. ಅಲ್ಲದೆ, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿತ್ತು. ಮೆರವಣಿಗೆಯಲ್ಲಿ ಸುಮಾರು 3ರಿಂದ 5 ಸಾವಿರ ಪ್ರತಿಭಟನಕಾರರು ರ‍್ಯಾಲಿ ನಡೆಸಲು ಸೇರಿದ್ದಾಗ ಹಿಂಸಾಚಾರ ನಡೆದಿದೆ.