ನವದೆಹಲಿ: 'ನೆರೆಯ ಪಾಕಿಸ್ತಾನದೊಂದಿಗೆ ಶಾಂತಿ ಬೆಳೆಸುವ ನಿಟ್ಟಿನಲ್ಲಿ ನಡೆಸಿರುವ ಪ್ರಾಮಾಣಿಕ ಪ್ರಯತ್ನವು ಶತ್ರುತ್ವ ಹಾಗೂ ದ್ರೋಹವನ್ನು ಎದುರಿಸಿತು' ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಭಾನುವಾರ) ಹೇಳಿದ್ದಾರೆ.
ಲೆಕ್ಸ್ ಫ್ರಿಡ್ಮನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಬಾಂಧವ್ಯದ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, '2014ರಲ್ಲಿ ನಾನು ಮೊದಲ ಬಾರಿಗೆ ಪ್ರಧಾನಿಯಾದಾಗ ಪ್ರಮಾಣವಚನ ಸಮಾರಂಭಕ್ಕೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ವಿಶೇಷವಾಗಿ ಆಹ್ವಾನಿಸಿದ್ದೆ.
ಎರಡೂ ದೇಶಗಳ ನಡುವಣ ಬಾಂಧವ್ಯ ವೃದ್ಧಿ ನಮ್ಮ ಉದ್ದೇಶವಾಗಿತ್ತು' ಎಂದು ತಿಳಿಸಿದ್ದಾರೆ.
'ಪ್ರತಿ ಸಲವೂ ಶಾಂತಿ ಬೆಳೆಸುವ ಪ್ರಾಮಾಣಿಕ ಪ್ರಯತ್ನವು ನಕಾರಾತ್ಮಕ ಪರಿಣಾಮವನ್ನು ಬೀರಿತ್ತು. ಆದರೂ ಪ್ರಜ್ಞಾವಂತಿಕೆಯು ಮೇಲುಗೈ ಸಾಧಿಸಲಿದ್ದು, ಪಾಕಿಸ್ತಾನ ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
'ಪಾಕಿಸ್ತಾನದ ಪ್ರಜೆಗಳು ಸಹ ಶಾಂತಿಯನ್ನು ಬಯಸುತ್ತಾರೆ ಎಂದು ನಾನು ನಂಬಿದ್ದೇನೆ. ಏಕೆಂದರೆ ಗಲಭೆ, ಅಶಾಂತಿ, ಭಯೋತ್ಪಾದನೆಯಲ್ಲಿ ಬದುಕುವುದರಿಂದ ಅಲ್ಲಿನ ಜನರು ಬೇಸತ್ತಿರಬೇಕು. ಅಲ್ಲಿ ಮುಗ್ಧ ಮಕ್ಕಳು ಕೊಲ್ಲಲ್ಪಡುತ್ತಾರೆ. ಅನೇಕ ಮಂದಿ ಸಾಯುತ್ತಿದ್ದಾರೆ' ಎಂದು
ದ್ವಿಪಕ್ಷೀಯ ಸಂಬಂಧ ಸುಧಾರಿಸುವ ನಮ್ಮ ಪ್ರಯತ್ನ ಸದ್ಭಾವನೆಯ ಸೂಚಕವಾಗಿತ್ತು ಎಂದು ಅವರು ಹೇಳಿದ್ದಾರೆ.
'ವಿದೇಶಾಂಗ ನೀತಿಯ ನನ್ನ ದೃಷ್ಟಿಕೋನವನ್ನು ಒಮ್ಮೆ ಪ್ರಶ್ನಿಸಿದ ಜನರು, ನಾನು ಸಾರ್ಕ್ ದೇಶಗಳ ನಾಯಕರನ್ನು ಆಹ್ವಾನಿಸಿದ್ದೇನೆ ಎಂದು ತಿಳಿದಾಗ ಆಶ್ಚರ್ಯಚಕಿತರಾದರು. ಭಾರತದ ವಿದೇಶಾಂಗ ನೀತಿ ಎಷ್ಟು ಸ್ಪಷ್ಟತೆಯಿಂದ ಕೂಡಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಇದು ಶಾಂತಿ, ಸಾಮರಸ್ಯಕ್ಕೆ ಭಾರತದ ಬದ್ಧತೆಯನ್ನು ಇಡೀ ಜಗತ್ತಿಗೆ ಸಾರಿತು. ಆದರೆ ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ' ಎಂದು ಅವರು ಹೇಳಿದ್ದಾರೆ.