ಕಾಸರಗೋಡು: ಮಧ್ಯವಯಸ್ಕನೊಬ್ಬನ ಜನನೇಂದ್ರಿಯದಲ್ಲಿ ಸಿಲುಕಿಕೊಂಡ ಕಬ್ಬಿಣದ ಬೋಲ್ಟನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಹೊರತೆಗೆದ ಘಟನೆ ಕಾಞಂಗಾಡಿನಲ್ಲಿ ನಡೆದಿದೆ. ಮಾರ್ಚ್ 25ರಂದು ತಡ ರಾತ್ರಿ ಕಾಞಂಗಾಡಿನ ಜನರಲ್ ಆಸ್ಪತ್ರೆಗೆ ವಿಶಿಷ್ಟ ರೀತಿಯ ರೋಗಿಯನ್ನು ಕರೆತರಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಪುರುಷ ಜನನೇಂದ್ರಿಯದಲ್ಲಿ ಬೋಲ್ಟ್ ಸಿಲುಕಿಕೊಂಡಿರುವುದು ಪತ್ತೆಯಾಗಿದ್ದು, ಹೊರತೆಗೆಯಲು ಶ್ರಮಿಸಿದರೂ ಸಾಧ್ಯವಾಗದಿದ್ದಾಗ ಅಗ್ನಿಶಾಮಕದಳ ಕಚೇರಿಗೆ ಮಾಹಿತಿ ನೀಡಿದ್ದಾರೆ!
ವೈದ್ಯರ ಕರೆಯ ಮೇರೆಗೆ ಅಸ್ಪತ್ರೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಧ್ಯವಯಸ್ಕನ ಸ್ಥಿತಿ ನೋಡಿ ಆತಂಕವೂ ಎದುರಾಗಿತ್ತು. ಬೋಲ್ಟ್ ಜನನಾಂಗದಲ್ಲಿ ಸಿಲುಕಿ ಕನಿಷ್ಠ ಎರಡು ದಿವಸಗಳಾಗಿರಬೇಕೆಂದು ಸಂಶಯಿಸಲಾಗಿದೆ. ಬೋಲ್ಟ್ ಸಿಲುಕಿಕೊಂಡ ಪರಿಣಾಮ ಜನನಾಂಗ ದಪ್ಪಗಾದ ಹಿನ್ನೆಲೆಯಲ್ಲಿ ಹೊರತೆಗೆಯಲಾಗದೆ ಮೂತ್ರ ಹೊರಬಾರದ ಸ್ಥಿತಿಯೂ ನಿರ್ಮಾಣವಾಗಿತ್ತು. ಈ ವಿಷಯ ಯಾರಲ್ಲೂ ತಿಳಿಸಲೂ ಆಗದೆ ವ್ಯಕ್ತಿ ಚಡಪಡಿಸಿ ಕೊನೆಗೂ ಆಸ್ಪತ್ರೆ ಧಾವಿಸಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರೂ ಕೈಚೆಲ್ಲಿದಾಗ ಅಗ್ನಿಶಾಮಕ ದಳ ಸಿಬ್ಬಂದಿ ಸಲಕರಣೆಯೊಂದಿಗೆ ವೈದ್ಯರ ಉಪಸ್ಥಿತಿಯಲ್ಲಿ ಬೋಲ್ಟ್ ತೆರವು ಪ್ರಕ್ರಿಯೆ ಅರಂಭಿಸಿದ್ದಾರೆ. ಬೋಲ್ಟ್ ತುಂಡರಿಸುವ ಮಧ್ಯೆ ಬಿಸಿಯಾಗದಿರಲು ನಿರಂತರ ನೀರು ಸುರಿಯುತ್ತಾ ಎರಡು ತಾಸುಗಳ ನಂತರ ಜನನಾಂಗದಿಂದ ಬೋಲ್ಟ್ ಬೇರ್ಪಡಿಸಿದ್ದಾರೆ.
ತಾನು ಮದ್ಯದ ನಶೆಯಲ್ಲಿದ್ದಾಗ ಯಾರೋ ಜನನಾಂಗಕ್ಕೆ ಬೋಲ್ಟ್ ತುರುಕಿಸಿರುವುದಾಗಿ ವ್ಯಕ್ತಿ ತಿಳಿಸುತ್ತಿದ್ದರೂ, ಇದರ ವಿಶ್ವಾಸಾರ್ಹತೆ ಬಗ್ಗೆ ಖಚಿತವಿಲ್ಲ. ಜನನಾಂಗಕ್ಕೆ ಬೋಲ್ಟ್ ತುರುಕಿ ಮೈಥುನ ನಡೆಸಿರಬೇಕೆಂದೂ ಸಂಶಯಿಸಲಾಗುತ್ತಿದೆ.
ಅಗ್ನಿಶಾಮಕ ದಳ ಅಧಿಕಾರಿ ಸಿ.ಪಿ ಪವಿತ್ರನ್ ನೇತೃತ್ವದ ತಂಡ ಅತ್ಯಂತ ಸೂಕ್ಷ್ಮ ರೀತಿಯ ಕಾರ್ಯಾಚರಣೆಯಿಂದ ಪುರುಷ ಜನನಾಂಗದಲ್ಲಿ ಸಿಲುಕಿಕೊಂಡಿದ್ದ ಬೋಲ್ಟ್ ಕೊನೆಗೂ ಹೊರತೆಗೆದಿದ್ದಾರೆ. ಕಾಸರಗೋಡಿನ ಚರಿತ್ರೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಈ ಹಿಂದೆ ಮಲಪ್ಪುರಂನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಆ ವ್ಯಕ್ತಿ ಮಾನಸಿಕ ಅಸ್ವಸ್ಥನಗಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.