ಹರಿಯಾಣ: ಇಲ್ಲಿಯ ರೋಹ್ಟಕ್ ಬಳಿ 22 ವರ್ಷದ ಕಾಂಗ್ರೆಸ್ ಕಾರ್ಯಕರ್ತೆಯ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ.
ರೋಹ್ಟಕ್-ದೆಹಲಿ ಹೆದ್ದಾರಿಯ ಸಂಪ್ಲಾ ಬಸ್ ನಿಲ್ದಾಣದ ಬಳಿ ಶವ ಪತ್ತೆಯಾಗಿದ್ದು, ಭಾರಿ ಸಂಚಲನ ಮೂಡಿಸಿದೆ.
ಮೃತ ಮಹಿಳೆಯನ್ನು ಹಿಮಾನಿ ನರ್ವಾಲ್ ಎಂದು ಗುರುತಿಸಲಾಗಿದೆ.
ಹಿಮಾನಿ ಅವರು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಭದ್ರಕೋಟೆಯಾದ ರೋಹ್ಟಕ್‌ನ ಯುವ ಕಾಂಗ್ರೆಸ್ ಪದಾಧಿಕಾರಿ ಎನ್ನಲಾಗಿದೆ.
ಶನಿವಾರ ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ದಾರಿಹೋಕರು ನೀಲಿ ಬಣ್ಣದ ಸೂಟ್‌ಕೇಸ್ ಕಂಡು ತೆಗೆದು ನೋಡಿದ್ದಾರೆ. ಆಗ ಮಹಿಳೆಯ ಶವ ಪತ್ತೆಯಾಗಿದೆ. ಬಿಳಿ ಬಣ್ಣದ ಕುರ್ತಾ ಮತ್ತು ಪ್ಯಾಂಟ್ ಧರಿಸಿದ್ದು, ಕುತ್ತಿಗೆಗೆ ಕಪ್ಪು ಬಣ್ಣದ ಶಾಲು ಇತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ದಿ ವೀಕ್ ಸುದ್ದಿ ಸಂಸ್ಥೆ ಪೊಲೀಸರ ಹೇಳಿಕೆ ಉಲ್ಲೇಖಸಿ ವರದಿ ಮಾಡಿದೆ.
ಹಿಮಾನಿ ಅವರು ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೊಂದಿಗೆ ಕಾಣಿಸಿಕೊಂಡಿದ್ದರು. ಹರಿಯಾಣದ ಸಾಂಪ್ರದಾಯಿಕ ಉಡುಗೆಯಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಅವರು ಹೆಚ್ಚು ಜನಪ್ರಿಯರಾಗಿದ್ದರು. ಹರಿಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಅವರು ಸಕ್ರಿಯರಾಗಿದ್ದು, ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು.
ಘಟನೆಯ ಕುರಿತು ಭೂಪೀಂದರ ಹೂಡಾ ಆಘಾತ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ. 'ರೋಹ್ಟಕ್‌ನ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಬರ್ಬರ ಹತ್ಯೆಯ ಸುದ್ದಿ ಅತ್ಯಂತ ದುಃಖಕರ ಮತ್ತು ಆಘಾತಕಾರಿಯಾಗಿದೆ. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಕುಟುಂಬಕ್ಕೆ ನನ್ನ ಸಂತಾಪಗಳು. ಯುವತಿಯೊಬ್ಬಳು ಈ ರೀತಿ ಹತ್ಯೆಯಾಗಿ ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾಗಿರುವುದು ಅತ್ಯಂತ ದುಃಖಕರ ಮತ್ತು ಆಘಾತಕಾರಿಯಾಗಿದೆ. ಇದು ಸ್ವತಃ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಕಳಂಕವಾಗಿದೆ' ಎಂದು ಬರೆದುಕೊಂಡಿದ್ದಾರೆ.