ನವದೆಹಲಿ: ಅಭಿವೃದ್ಧಿ ಹೊಂದುತ್ತಿರುವ ದೇಶವು ಬಾಡಿಗೆ ಹಂತಕರಿಂದ ಸೃಷ್ಟಿಯಾದ ಪಿಡುಗಿಗಿಂತ ದೊಡ್ಡದಾದ ಸಮಸ್ಯೆಯೊಂದನ್ನು ಎದುರಿಸುತ್ತಿದೆ ಎಂದಾದರೆ, ಸರ್ಕಾರ ಹಾಗೂ ರಾಜಕೀಯ ಪಕ್ಷಗಳಲ್ಲಿನ ಉನ್ನತ ಮಟ್ಟದಲ್ಲಿ ಇರುವವರ ಭ್ರಷ್ಟಾಚಾರ ಆ ಸಮಸ್ಯೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಿರೀಕ್ಷಣಾ ಜಾಮೀನು ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಕ್ರಮವನ್ನು ಪ್ರಶ್ನಿಸಿ ದೇವಿಂದರ್ ಕುಮಾರ್ ಬನ್ಸಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇದ್ದ ವಿಭಾಗೀಯ ಪೀಠವು ಈ ಮಾತು ಹೇಳಿದೆ.
'ಆರೋಪಿಯ ಹಿತ ಹಾಗೂ ಸಾರ್ವಜನಿಕರ ಹಿತವನ್ನು ಸಮತೋಲನದಿಂದ ಕಾಣಬೇಕು. ಆರೋಪಿಯ ಸ್ವಾತಂತ್ರ್ಯದ ಬಗ್ಗೆ ಅತಿಯಾದ ಕಾಳಜಿ ತೋರುವುದು ಕೆಲವೊಮ್ಮೆ ಸಾರ್ವಜನಿಕ ಹಿತಕ್ಕೆ ಕೆಡುಕು ಉಂಟುಮಾಡಬಹುದು' ಎಂದು ಪೀಠವು ಮಾರ್ಚ್ 3ರಂದು ನೀಡಿರುವ ತೀರ್ಪಿನಲ್ಲಿ ಹೇಳಿದೆ.
ಲೆಕ್ಕ ತಪಾಸಣಾ ಅಧಿಕಾರಿಯಾಗಿರುವ ಬನ್ಸಲ್ ಅವರು ವಿಜಿಲೆನ್ಸ್ ಬ್ಯೂರೊದಲ್ಲಿ ಕೆಲಸ ಮಾಡುತ್ತಿದ್ದಾರೆ. ಲಂಚ ಕೇಳಿದ ಆರೋಪದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಭ್ರಷ್ಟಾಚಾರ ಮುಕ್ತ ಸಮಾಜವನ್ನು ಖಾತರಿಪಡಿಸಲು ಆರೋಪಿಯೊಬ್ಬರಿಗೆ ಸ್ವಾತಂತ್ರ್ಯವನ್ನು ನಿರಾಕರಿಸಬೇಕು ಎಂದಾದರೆ, ಆ ಕೆಲಸ ಮಾಡಲು ನ್ಯಾಯಾಲಯಗಳು ಹಿಂದೇಟು ಹಾಕಬಾರದು ಎಂದು ಪೀಠವು ಹೇಳಿದೆ.
'ಅರ್ಜಿದಾರರನ್ನು ಅಪರಾಧ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಅನ್ನಿಸಿದ್ದಾಗ, ಆರೋಪಗಳು ರಾಜಕೀಯ ಪ್ರೇರಿತವಾಗಿದ್ದಾಗ ಅಥವಾ ಆರೋಪಗಳಲ್ಲಿ ಹುರುಳಿಲ್ಲದಿದ್ದಾಗ, ಸಾಧಾರಣವಲ್ಲದ ಸಂದರ್ಭಗಳಲ್ಲಿ ಮಾತ್ರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು' ಎಂದು ವಿಭಾಗೀಯ ಪೀಠ ಹೇಳಿದೆ.
ಈ ಪ್ರಕರಣದಲ್ಲಿ ಸಾಧಾರಣವಲ್ಲದ ಸಂದರ್ಭ ಏನಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿಲ್ಲ ಎಂದು ಹೇಳಿದೆ. 'ದುರಾಸೆ ಎಂಬುದು ಮನುಷ್ಯನಲ್ಲಿ ಬಹಳ ಸಾಮಾನ್ಯವಾಗಿ ಕಾಣುವ ದೌರ್ಬಲ್ಯ. ಆಮಿಷ ದೊಡ್ಡದಿದ್ದರೆ ಎಲ್ಲ ಮನುಷ್ಯರೂ ತಮ್ಮ ನೈತಿಕತೆಯನ್ನು ಬಿಟ್ಟುಕೊಡುತ್ತಾರೆ ಎಂದು ರಾಬರ್ಟ್ ವಾಲ್‌ಪೋಲ್ ಅವರು ಹೇಳಿದ ಮಾತಿನಲ್ಲಿ ಸಿನಿಕತೆ ಇದ್ದರೂ, ಅದು ಸತ್ಯಕ್ಕೆ ಬಹಳ ದೂರವಾಗಿಲ್ಲ' ಎಂದು ಪೀಠ ಹೇಳಿದೆ.
ಎರಡು ಶತಮಾನಗಳಿಗೂ ಹಿಂದೆ ಬುಕ್ ಅವರು, 'ಭ್ರಷ್ಟ ವ್ಯಕ್ತಿಗಳ ನಡುವೆ ಸ್ವಾತಂತ್ರ್ಯವು ಬಹುಕಾಲ ಉಳಿಯುವುದಿಲ್ಲ' ಎಂದು ಹೇಳಿದ್ದರು. ಭ್ರಷ್ಟಾಚಾರಕ್ಕೆ ಪ್ರತಿರೋಧ ಇಲ್ಲದಿದ್ದುದೇ ಫ್ರಾನ್ಸ್‌ಗೆ ಕೆಡುಕನ್ನು ಉಂಟುಮಾಡಿತು ಎಂದು ಈಚಿನ ಕಾಲಘಟ್ಟದಲ್ಲಿ ರೊಮೇನ್ ರೊಲ್ಯಾಂಡ್ ಅವರು ಹೇಳಿದ್ದಾರೆ ಎಂದು ಪೀಠವು ಹೇಳಿದೆ.
'ಭ್ರಷ್ಟಾಚಾರದ ಅಗಾಧತೆಯ ಬಗ್ಗೆ ಜನರಲ್ಲಿ ಇರುವ ಅಭಿಪ್ರಾಯದಲ್ಲಿ ಒಂದು ತುಣುಕಿನಷ್ಟು ಮಾತ್ರವೇ ಸತ್ಯವಿದೆ ಎನ್ನುವುದಾದರೂ, ಉನ್ನತ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳು ಯಾವ ಭೀತಿಯೂ ಇಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿರುವುದು ಈ ದೇಶದಲ್ಲಿ ಆರ್ಥಿಕ ಅಶಾಂತಿಗೆ ಕಾರಣವಾಗಿದೆ ಎಂಬುದು ಸತ್ಯಕ್ಕೆ ದೂರವಲ್ಲದ ಸಂಗತಿ' ಎಂದು ಪೀಠ ಕಟುವಾಗಿ ಹೇಳಿದೆ.
'ನಮ್ಮ ಸಮಾಜವು ಸಮೃದ್ಧಿಯ ಕಡೆ ಸಾಗುವುದನ್ನು ತಡೆಹಿಡಿದಿರುವ ಒಂದೇ ಒಂದು ಕಾರಣವನ್ನು ಹೇಳುವಂತೆ ಯಾರನ್ನಾದರೂ ಕೋರಿದರೆ, ಆ ಕಾರಣವು ಭ್ರಷ್ಟಾಚಾರವೇ ಆಗಿರುತ್ತದೆ ಎಂಬುದನ್ನು ನಿರಾಕರಿಸಲಾಗದು' ಎಂದು ಕೂಡ ಹೇಳಿದೆ.