ನವದೆಹಲಿ: ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್ ಆದ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ (GDP growth) ಚುರುಕು ಪಡೆಯುವ ನಿರೀಕ್ಷೆ ಇದೆ. ಹೆಚ್ಚಿನ ಸೂಚಕಗಳು ಉತ್ತಮ ಜಿಡಿಪಿ ವೃದ್ಧಿ ಸಾಧ್ಯತೆಯನ್ನು ತೋರಿಸುತ್ತಿವೆ.
ವಿಮಾನ ಪ್ರಯಾಣ, ಹೊಸ ವಾಹನ ಮಾರಾಟ ಕಡಿಮೆ ಆಗಿದ್ದರೂ, ಜಿಎಸ್ಟಿ ಸಂಗ್ರಹ, ಇ-ವೇ ಬಿಲ್ ಇತ್ಯಾದಿಗಳು ಹೆಚ್ಚಿರುವುದು ಗರಿಗೆದರಿದ ಆರ್ಥಿಕತೆಯ ಕುರುಹಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ವರದಿಯಲ್ಲಿ ಹೇಳಲಾಗಿದೆ. ಕುಂಭಮೇಳದಲ್ಲಿ ನಡೆದ ಅಮೋಘ ವ್ಯಾಪಾರ ವಹಿವಾಟು, ಸರಕು ಮತ್ತು ಸೇವಾ ಮಾರಾಟವು ಜಿಡಿಪಿ ಬೆಳವಣಿಗೆಗೆ ಪುಷ್ಟಿ ನೀಡಿರಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.
ಮಾರ್ಚ್ ಅಂತ್ಯದ ಕ್ವಾರ್ಟರ್ನಲ್ಲಿ ಉತ್ತಮ ಬೆಳವಣಿಗೆ ಕಾಣುವ ಸಂಭವ ಇರುವ ಹಿನ್ನೆಲೆಯಲ್ಲಿ ಇಡೀ ಹಣಕಾಸು ವರ್ಷದಲ್ಲಿ (2024-25) ಜಿಡಿಪಿ ದರ ಶೇ. 6.5ರಷ್ಟಿರಬಹುದು ಎಂದು ಬಿಒಬಿ ಅಂದಾಜು. ಕೃಷಿ ವಲಯ ನಿರೀಕ್ಷೆಮೀರಿದ ಬೆಳವಣಿಗೆ ಕಂಡಿರುವುದು ಕೂಡ ಆರ್ಥಿಕತೆಗೆ ಪ್ಲಸ್ ಪಾಯಿಂಟ್. ಮೂರನೇ ಕ್ವಾರ್ಟರ್ನಲ್ಲಿ ಈ ಸೆಕ್ಟರ್ ಶೇ. 5.6ರಷ್ಟು ಬೆಳೆದಿತ್ತು. ಹಿಂದಿನ ವರ್ಷದ ಮೂರನೇ ಕ್ವಾರ್ಟರ್ನಲ್ಲಿ (2024ರ ಅಕ್ಟೋಬರ್ನಿಂದ ಡಿಸೆಂಬರ್) ಕೃಷಿ ಸೆಕ್ಟರ್ ಶೇ. 1.5ರಷ್ಟು ಮಾತ್ರ ಬೆಳೆದಿತ್ತು. ಈ ವರ್ಷ ಮುಂಗಾರು ಬೆಳೆಗಳು ಉತ್ತಮ ಫಸಲು ನೀಡಿವೆ. ಹಣ್ಣು, ತರಕಾರಿಗಳ ಬೆಲೆ ಸಾಕಷ್ಟು ಕಡಿಮೆ ಆಗಿದೆ. ನಾಲ್ಕನೇ ಕ್ವಾರ್ಟರ್ನಲ್ಲೂ ಕೃಷಿ ಕ್ಷೇತ್ರದ ದರ ಉತ್ತಮವಾಗಿಯೇ ಇರುವ ನಿರೀಕ್ಷೆ ಇದೆ.
ಕ್ರಿಸಿಲ್ ವರದಿಯಲ್ಲೂ ಜಿಡಿಪಿ ದರ ಶೇ. 6.5 ಅಂದಾಜು
ಅಮೆರಿಕ ಮೂಲದ ರೇಟಿಂಗ್ ಏಜೆನ್ಸಿಯಾದ ಕ್ರಿಸಿಲ್ (Crisil) ಕೂಡ ಭಾರತದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 6.5ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಿದೆ. ಅಷ್ಟೇ ಅಲ್ಲ, ಮುಂಬರುವ ವರ್ಷಗಳಲ್ಲೂ ಭಾರತ ಸ್ಥಿರ ಬೆಳವಣಿಗೆ ಕಾಣಬಹುದು ಎಂದು ಈ ಏಜೆನ್ಸಿ ನಿರೀಕ್ಷಿಸಿದೆ.
ಕ್ರಿಸಿಲ್ ಪ್ರಕಾರ, ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಮುಂದಿನ ಐದಾರು ವರ್ಷ ಶೇ. 9ರ ಸರಾಸರಿ ದರದಲ್ಲಿ ಬೆಳವಣಿಗೆ ಹೊಂದುವ ಸಾಧ್ಯತೆ ಇದೆ. 2020ಕ್ಕೆ ಮುನ್ನ ಈ ವಲಯದ ಸರಾಸರಿ ಬೆಳವಣಿಗೆ ಶೇ 6ರಷ್ಟಿತ್ತು. ಈಗ ಅದು ಉತ್ತಮ ರೀತಿಯಲ್ಲಿ ಬೆಳೆಯಲಿದೆ. 2030-31ರ ಹಣಕಾಸು ವರ್ಷದಷ್ಟರಲ್ಲಿ ತಯಾರಿಕಾ ವಲಯದ ಜಿಡಿಪಿ ಪಾಲು ಶೇ. 20ಕ್ಕೆ ಏರಬಹುದು ಎಂದು ಕ್ರಿಸಿಲ್ ಅಂದಾಜಿಸಿದೆ.
ಭಾರತದ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾದ ಸರ್ವಿಸ್ ಸೆಕ್ಟರ್ ನಿಧಾನಗತಿಯಲ್ಲಿ ಬೆಳೆದರೂ ಕೂಡ ಮುಂದಿನ ಕೆಲ ವರ್ಷಗಳವರೆಗೂ ಜಿಡಿಪಿಗೆ ಈ ಸೆಕ್ಟರ್ನ ಕೊಡುಗೆ ಗರಿಷ್ಠವಾಗಿಯೇ ಇರಲಿದೆ ಎಂಬುದು ಈ ರೇಟಿಂಗ್ ಏಜೆನ್ಸಿಯ ಅನಿಸಿಕೆ.