ಗಾಂಧಿನಗರ: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ 'ಲಖ್‌ಪತಿ ದೀದಿ' ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದ್ದು ವಿಶೇಷವಾಗಿದೆ.
ನವಸಾರಿ ಜಿಲ್ಲೆಯ ಬೋರ್ಸಿ ಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸುಮಾರು 1.5 ಲಕ್ಷ ಜನರು ಭಾಗವಹಿಸಿದ್ದರು.
ಜನ ಸಮೂಹವನ್ನು ನಿಯಂತ್ರಿಸಲು ಸುಮಾರು 2,500 ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಕಾನ್‌ಸ್ಟೆಬಲ್‌ಗಳು ನಿಯೋಜನೆಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಬಳಿಕ 'ಲಖ್‌ಪತಿ ದೀದಿ' ಕಾರ್ಯಕ್ರಮದ ಪ್ರಮಾಣ ಪತ್ರಗಳನ್ನು ವಿತರಿಸಿದರು.
'ಪ್ರಧಾನಿ ಮೋದಿ ಅವರ ಕಾರ್ಯಕ್ರಮವಾಗಿರುವುದರಿಂದ ಭದ್ರತೆಗಾಗಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ಕಳೆದ ಮೂರು ದಿನಗಳಿಂದ ಪೊಲೀಸ್ ಕಾನ್‌ಸ್ಟೆಬಲ್‌ನಿಂದ ಹಿಡಿದು ಉನ್ನತ ಶ್ರೇಣಿಯ ಅಧಿಕಾರಿಗಳವರೆಗೆ ಭದ್ರತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲಾಗಿತ್ತು' ಎಂದು ಹೆಚ್ಚುವರಿ ಡಿಜಿಪಿ ನಿಪುಣ ತೋರ್ವಾನೆ ತಿಳಿಸಿದ್ದಾರೆ.
'ಭದ್ರತೆಗಾಗಿ ಸುಮಾರು 2,145 ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು, 61 ಮಹಿಳಾ ಇನ್‌ಸ್ಪೆಕ್ಟರ್, 187 ಮಹಿಳಾ ಸಬ್ ಇನ್‌ಸ್ಪೆಕ್ಟರ್‌ಗಳು, 19 ಮಹಿಳಾ ಪೊಲೀಸ್ ಉಪ ಸೂಪರಿಂಟೆಂಡೆಂಟ್, ಐವರು ಮಹಿಳಾ ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ಡೆಪ್ಯೂಟಿ ಇನ್‌ಸ್ಪೆಕ್ಟರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು' ಎಂದು ನಿಪುಣ ಹೇಳಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಉನ್ನತ ಮಟ್ಟದ ಕಾರ್ಯಕ್ರಮದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಹಿಳೆಯರಿಗೆ ವಹಿಸಲಾಗಿತ್ತು. ಈ ಕಾರ್ಯಕ್ರಮವು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಮಹಿಳಾ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ ಎಂದು ನಿಪುಣ ಹೇಳಿದ್ದಾರೆ.